ಇಟಾನಗರ: ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಸೇನೆಯ ಹೆಲಿಕಾಪ್ಟರ್ ದುರಂತದಲ್ಲಿ ಎಲ್ಲ ಐವರು ಮೃತಪಟ್ಟಿದ್ದಾರೆ. ನಾಪತ್ತೆಯಾಗಿದ್ದ ಓರ್ವ ಸಿಬ್ಬಂದಿಯ ಮೃತದೇಹ ಶನಿವಾರ ಸಿಕ್ಕಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದೈನಂದಿನ ತಾಲೀಮು ನಡೆಸುತ್ತಿದ್ದ 'ಸುಧಾರಿತ ಲಘು ಹೆಲಿಕಾಪ್ಟರ್' (ಎಎಲ್‌ಎಚ್) ಬೆಳಿಗ್ಗೆ 10.43ಕ್ಕೆ ಮಿಗ್ಗಿಂಗ್ ಎಂಬ ಹಳ್ಳಿಯ ಸಮೀಪ ಪತನಗೊಂಡಿತ್ತು. ಘಟನಾ ಸ್ಥಳದಲ್ಲಿ ನಾಲ್ಕು ಶವಗಳು ಸಿಕ್ಕಿದ್ದವು. ನಾಪತ್ತೆಯಾಗಿದ್ದ ಓರ್ವ ಸಿಬ್ಬಂದಿಗಾಗಿ ಹುಡುಕಾಟ ನಡೆದಿತ್ತು.
ಹೆಲಿಕಾಪ್ಟರ್ ಪತನವಾಗಿರುವ ಸ್ಥಳವು ಚೀನಾ ಗಡಿಯಿಂದ 35 ಕಿ.ಮೀ.ದೂರದಲ್ಲಿದ್ದು, ಪರ್ವತಗಳಿಂದ ಕೂಡಿದೆ. ಸೇನೆ ಮತ್ತು ವಾಯು ಪಡೆಗಳು ಜಂಟಿಯಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು.
ರಾಜ್ಯದಲ್ಲಿ ಈ ತಿಂಗಳು ಸೇನೆಯ ಹೆಲಿಕಾಪ್ಟರ್ ಪತನಗೊಂಡ ಎರಡನೇ ದುರಂತ ಇದಾಗಿದೆ. ಅಕ್ಟೋಬರ್ 5ರಂದು ತವಾಂಗ್ ಜಿಲ್ಲೆಯಲ್ಲಿ ಚೀತಾ ಹೆಲಿಕಾಪ್ಟರ್ ಪತನವಾಗಿ, ಒಬ್ಬ ಪೈಲಟ್ ಮೃತಪಟ್ಟಿದ್ದರು.