ನವದೆಹಲಿ: ಸಣ್ಣ ಸಣ್ಣ ನಗರಗಳಲ್ಲೂ ಖಾಸಗಿ ಎಫ್‌ಎಂ ವಾಹಿನಿಗಳ ಸೇವೆಯನ್ನು ವಿಸ್ತರಿಸಲು ಖಾಸಗಿ ಎಫ್‌ಎಂ ಮೂರನೇ ಹಂತದ ಮಾರ್ಗಸೂಚಿಗಳಿಗೆ ಕೇಂದ್ರ ಸರ್ಕಾರವು ತಿದ್ದುಪಡಿ ತಂದಿದೆ. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
'ಸಿ' ಮತ್ತು 'ಡಿ' ವರ್ಗದ ನಗರಗಳಿಗಾಗಿ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ₹1 ಕೋಟಿ ನಿವ್ವಳ ಮೌಲ್ಯ ಇರುವ ಖಾಸಗಿ ಕಂಪನಿಗಳೂ ಭಾಗವಹಿಸಬಹುದು ಎಂದು ಕೇಂದ್ರ ಹೇಳಿದೆ. ಈ ಹಿಂದೆ, ₹1.5 ಕೋಟಿ ನಿವ್ವಳ ಮೌಲ್ಯ ಇರುವ ಕಂಪನಿಗಳು ಮಾತ್ರ ಹರಾಜಿನಲ್ಲಿ ಭಾಗವಹಿಸಬಹುದಿತ್ತು.
ಒಂದು ಕಂಪನಿಗೆ 15 ವರ್ಷ ಪರವಾನಗಿ ಅವಧಿ ಇರುತ್ತದೆ. ಮೊದಲ ಮೂರು ವರ್ಷಗಳಲ್ಲಿ ಕಂಪನಿಯು ತನ್ನ ಕಾರ್ಯಕ್ರಮದ ಮಾದರಿಯನ್ನು ಬದಲಾಯಿಸಿಕೊಳ್ಳದಂತೆ ನಿರ್ಬಂಧ ಇತ್ತು. ಈಗ ಈ ನಿರ್ಬಂಧವನ್ನು ಕೇಂದ್ರ ತಗೆದುಹಾಕಿದೆ.
ದೇಶದಲ್ಲಿ ಪರವಾನಗಿ ನೀಡಲಾದ ಒಟ್ಟು ಎಫ್‌ಎಂ ವಾಹಿನಿಗಳ ಪೈಕಿ ಒಂದು ಕಂಪನಿಗೆ ಗರಿಷ್ಠ ಶೇ 15ರಷ್ಟು ವಾಹಿನಿಗಳ ಮಾಲೀಕತ್ವವನ್ನು ಹೊಂದಲು ಮಾತ್ರ ಅವಕಾಶ ಇತ್ತು. ಈ ನಿರ್ಬಂಧವನ್ನು ತೆಗೆದು ಹಾಕುವಂತೆ ಎಫ್‌ಎಂ ಕಂಪನಿಗಳು ಹಲವು ವರ್ಷಗಳಿಂದ ಬೇಡಿಕೆ ಇರಿಸಿದ್ದವು. ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ಮಾನ್ಯ ಮಾಡಿದೆ.
ಈ ಮೂರು ತಿದ್ದುಪಡಿಗಳು ದೇಶದಲ್ಲಿ ಎಫ್‌ಎಂ ವಾಹಿನಿಗಳ ವಿಸ್ತರಣೆಗೆ ನೆರವಾಗಲಿದೆ. ಇದು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.