ಗಾಂಧಿನಗರ : 'ಭಾರತೀಯ ರಕ್ಷಣಾ ಪಡೆಗಳು ದೇಶಿಯವಾಗಿ ಅಭಿವೃದ್ಧಿಪಡಿಸಿದ ರಕ್ಷಣಾ ಸಲಕರಣೆಗಳನ್ನೇ ಹೆಚ್ಚಾಗಿ ಖರೀದಿಸಲು ತೀರ್ಮಾನಿಸಿವೆ. ಇದು 'ಆತ್ಮನಿರ್ಭರ ಭಾರತ'ದ ಸಾಮರ್ಥ್ಯಕ್ಕೆ ಸಾಕ್ಷಿ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಡಿಫೆನ್ಸ್ ಎಕ್ಸ್‌ಫೋ-2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 'ರಕ್ಷಣಾ ವಲಯದಲ್ಲಿ ಕೆಲ ಕಂಪನಿಗಳ ಏಕಸ್ವಾಮ್ಯದ ಹೊರತಾಗಿಯೂ ಭಾರತವು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸ್ಥಾನ ಹೊಂದಿದೆ. ನಮ್ಮ ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತಿರುವುದಕ್ಕೆ ಇದು ನಿದರ್ಶನ' ಎಂದಿದ್ದಾರೆ.
'2021-22ರಲ್ಲಿ ಭಾರತದ ರಕ್ಷಣಾ ಸಲಕರಣೆಗಳ ರಫ್ತು ಸಾಮರ್ಥ್ಯ ₹13 ಸಾವಿರ ಕೋಟಿಗೆ ತಲುಪಿದೆ. ಇದನ್ನು ₹40 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ' ಎಂದು ಹೇಳಿದ್ದಾರೆ.
'ಕರಾವಳಿ ಭದ್ರತೆಯು ಈಗ ಜಾಗತಿಕ ಆದ್ಯತೆಯಾಗಿ ಹೊರಹೊಮ್ಮಿದೆ. ಬಾಹ್ಯಾಕಾಶ ವಲಯದಲ್ಲಿನ ಭವಿಷ್ಯದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಜಾಗತೀಕರಣದ ಕಾಲಘಟ್ಟದಲ್ಲಿ ವಾಣಿಜ್ಯ ಉದ್ದೇಶದ ನೌಕಾಯಾನದ ಪಾತ್ರವೂ ಮಹತ್ವದ್ದಾಗಿದೆ' ಎಂದು ತಿಳಿಸಿದ್ದಾರೆ.
ಭಾರತ ಮತ್ತು ಆಫ್ರಿಕಾ ನಡುವಣ ಬಾಂಧವ್ಯದ ಕುರಿತು ಮಾತನಾಡಿದ ಮೋದಿ, 'ನಂಬಿಕೆಯ ನೆಲೆಗಟ್ಟಿನಲ್ಲಿದ್ದ ಈ ಬಾಂಧವ್ಯವು ಮತ್ತಷ್ಟು ಆಳಕ್ಕೆ ವಿಸ್ತರಿಸುತ್ತಾ ಸಾಗಿದ್ದು, ಕಾಲಕ್ಕೆ ಅನುಗುಣವಾಗಿ ಹೊಸ ಆಯಾಮಗಳೆಡೆ ಹೊರಳುತ್ತಿದೆ' ಎಂದಿದ್ದಾರೆ.
'ಭಾರತದಲ್ಲಿ ತಯಾರಿಸಿರುವ ರಕ್ಷಣಾ ಸಲಕರಣೆಗಳ ರಫ್ತು ಪ್ರಮಾಣವು, ಹಿಂದಿನ ಕೆಲ ವರ್ಷಗಳಲ್ಲಿ ಒಟ್ಟು ಎಂಟು ಪಟ್ಟು ಏರಿಕೆಯಾಗಿದೆ. ರಕ್ಷಣಾ ಪಡೆಗಳು ತಮ್ಮ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿವೆ. ಹೀಗಾಗಿ ಇಡೀ ಜಗತ್ತು ಭಾರತದ ತಂತ್ರಜ್ಞಾನದ ಮೇಲೆ ನಂಬಿಕೆ ಇಟ್ಟಿದೆ. ನಾವು 75ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಕ್ಷಣಾ ಸಲಕರಣೆಗಳನ್ನು ರಫ್ತು ಮಾಡುತ್ತಿದ್ದೇವೆ. ನಮ್ಮ ನೀತಿಗಳು ಹಾಗೂ ಸುಧಾರಣೆಗಳು ಇದಕ್ಕೆ ಬಹುಮುಖ್ಯ ಕಾರಣ' ಎಂದು ಮೋದಿ ಹೇಳಿದ್ದಾರೆ.
'ಭಾರತವು ತನ್ನ ರಕ್ಷಣಾ ಆಯವ್ಯಯದ ಶೇ 68ರಷ್ಟು ಮೊತ್ತವನ್ನು ದೇಶಿಯ ಕಂಪನಿಗಳಿಗಾಗಿ ಮೀಸಲಿಟ್ಟಿದೆ. ಇದು ಮಹತ್ವದ ನಿರ್ಧಾರ. ನಮ್ಮ ರಕ್ಷಣಾ ಪಡೆಗಳು ಹೊಸ ಆವಿಷ್ಕಾರದ ಅವಕಾಶಗಳನ್ನು ಕಂಡುಕೊಳ್ಳಬೇಕಿದೆ. ಸುಮಾರು 60 ಪ್ರಗತಿಶೀಲ ರಾಷ್ಟ್ರಗಳೊಂದಿಗೆ ದೇಶವು ತನ್ನ ಬಾಹ್ಯಾಕಾಶ ವಿಜ್ಞಾನವನ್ನು ಹಂಚಿಕೊಳ್ಳುತ್ತಿದೆ. ಯುರೋಪ್ ಮತ್ತು ಅಮೆರಿಕದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೂ ನಮ್ಮ ಉಪಗ್ರಹ ದತ್ತಾಂಶ ಬಳಕೆ ಮಾಡುತ್ತಿವೆ' ಎಂದೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.