ನವದೆಹಲಿ: ಭಯೋತ್ಪಾದಕರು, ಗ್ಯಾಂಗ್‌ಸ್ಟರ್‌ಗಳು ಮತ್ತು ಮಾದಕ ವಸ್ತು ಸಾಗಣೆದಾರರ ನಡುವಿನ ನಂಟನ್ನು ಕತ್ತರಿಸುವ ಉದ್ದೇಶದಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ) ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ಎನ್‌ಸಿಆರ್ ಪ್ರದೇಶಗಳಲ್ಲಿ ದಾಳಿ ನಡೆಸಿದೆ.
ಭಾರತ ಮತ್ತು ವಿದೇಶಗಳಲ್ಲಿ ಈ ಸಮಾಜ ವಿರೋಧಿ ಕೂಟಗಳ ನಂಟನ್ನು ಬೇರ್ಪಡಿಸುವ ಉದ್ದೇಶದಿಂದ ಈ ದಾಳಿ ನಡೆದಿದೆ ಎಂದು ಎನ್‌ಐಎ ಟ್ವೀಟ್ ಮಾಡಿದೆ. ಗ್ಯಾಂಗ್‌ಸ್ಟರ್‌ಗಳ ಮನೆಗಳು ಸೇರಿ 50 ಕಡೆ ದಾಳಿ ನಡೆಸಲಾಗಿದೆ.
ಗ್ಯಾಂಗ್‌ಸ್ಟರ್‌ಗಳು ಹಾಗೂ ಭಾರತ ಹಾಗೂ ವಿದೇಶಗಳಲ್ಲಿರುವ ಅವರ ಸಹಚರರು ಭಯೋತ್ಪಾದಕ ಮತ್ತು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಆಗಸ್ಟ್ 26ರಂದು ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು.
ದಾಳಿ ವೇಳೆ ಪಿಸ್ತೂಲ್‌ಗಳು, ಗನ್, ಗುಂಡು, ಮಾದಕದ್ರವ್ಯ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ, ಕೆಲವು ಮಹತ್ವದ ದಾಖಲೆಗಳು, ಬೇನಾಮಿ ಆಸ್ತಿ ಮತ್ತು ಡಿಜಿಟಲ್ ಉಪಕರಣಗಳನ್ನೂ ಜಪ್ತಿ ಮಾಡಲಾಗಿದೆ.
ಪ್ರಕರಣದಲ್ಲಿ ಹೆಸರಿಸಲಾಗಿರುವ ಕೆಲ ಗ್ಯಾಗ್‌ಸ್ಟರ್‌ಗಳು, ಪಾಕಿಸ್ತಾನ, ಕೆನಡಾ, ಮಲೇಶಿಯಾ ಮತ್ತು ಆಸ್ಟ್ರೇಲಿಯಾಗೆ ಪರಾರಿಯಾಗಿದ್ದು, ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ.