ನವದೆಹಲಿ : 1991ರ ಪೂಜಾ ಸ್ಥಳಗಳ ಕಾಯ್ದೆಯ ಕೆಲ ನಿಬಂಧನೆಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳಿಗೆ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್‌ಬಿ) ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು 1947ರ ಆಗಸ್ಟ್ 15ರಂದು ಹೇಗಿತ್ತೋ ಆ ರೀತಿಯಲ್ಲಿಯೇ ಅದನ್ನು ಕಾಯ್ದುಕೊಂಡು ಹೋಗುವ ಉದ್ದೇಶವನ್ನು ಈ ಕಾಯ್ದೆ ಹೊಂದಿದ್ದು, ಇದರ ಕೆಲ ನಿಬಂಧನೆಗಳು ಪೂಜಾ ಸ್ಥಳವನ್ನು ಮರಳಿ ಪಡೆಯುವುದಕ್ಕಾಗಿ ಮೊಕದ್ದಮೆ ಹೂಡುವ ಅವಕಾಶವನ್ನು ನಿರಾಕರಿಸುತ್ತದೆ.
'1991ರ ಪೂಜಾ ಸ್ಥಳಗಳ ಕಾಯ್ದೆಯು 'ಪ್ರಗತಿಪರ ಶಾಸನ'ವಾಗಿದೆ. ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ. ಸಾಮರಸ್ಯ, ಸಾರ್ವಜನಿಕ ನೆಮ್ಮದಿಯನ್ನು ಉತ್ತೇಜಿಸುತ್ತದೆ. ವಿವಿಧ ವರ್ಗಗಳ ಜನರ ನಡುವೆ ಶಾಂತಿ ನೆಲೆಗೊಳ್ಳುವಂತೆ ಮಾಡುತ್ತದೆ' ಎಂದು ಎಐಎಂಪಿಎಲ್‌ಬಿಯು ನ್ಯಾಯಾಲಯಕ್ಕೆ ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ ತಿಳಿಸಿದೆ.
'ಈ ಕಾಯ್ದೆಯು ಸಂವಿಧಾನದ ಮೂಲಭೂತ ಲಕ್ಷಣಗಳ ಆಧಾರದ ಮೇಲೆ ರಚಿತವಾಗಿದೆ. ಇದು ಯಾವುದೇ ಬಗೆಯ ಸಾಂಸ್ಕೃತಿಕ ಹಕ್ಕುಗಳನ್ನೂ ಉಲ್ಲಂಘಿಸುವುದಿಲ್ಲ. ಹೀಗಾಗಿ ಸಂಬಂಧಿತ ಕಾಯ್ದೆಯ ಕೆಲ ನಿಬಂಧನೆಗಳನ್ನು ರದ್ದುಪಡಿಸುವ ಅಥವಾ ಅವುಗಳಿಗೆ ತಿದ್ದುಪಡಿ ಮಾಡುವ ಪ್ರಯತ್ನಕ್ಕೆ ಕೈಹಾಕಬಾರದು. ಹಾಗೆ ಮಾಡುವುದು ಅಸಾಂವಿಧಾನಿಕವೆನಿಸುತ್ತದೆ' ಎಂದು ಹೇಳಿದೆ.
'ವಿಶ್ವ ಭದ್ರಾ ಪೂರ್ಜಾರಿ ಪುರೋಹಿತ ಮಹಾಸಂಘ' ಹಾಗೂ ಇತರರು ಸಲ್ಲಿಸಿರುವ ಅರ್ಜಿಗಳು ರಾಜಕೀಯ ದುರುದ್ದೇಶಗಳನ್ನು ಒಳಗೊಂಡಿವೆ. ಈ ಅರ್ಜಿಗಳ ವಿಚಾರಣೆಯು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ' ಎಂದೂ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ನ್ಯಾಯಪೀಠವು ಕಾಯ್ದೆಯ ಕೆಲ ನಿಬಂಧನೆಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಇದೇ 11 ರಂದು ನಡೆಸುವ ಸಾಧ್ಯತೆ ಇದೆ.