ಕೊಚ್ಚಿ: ಸರಗಳ್ಳನನ್ನು ಹಿಡಿಯುವಾಗ ಪೊಲೀಸ್ ಅಧಿಕಾರಿಯೊಬ್ಬರಿಗೆ ಹಾವು ಕಡಿದಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಮಟ್ಟನೂರು ಪಟ್ಟಣದಲ್ಲಿ ನಡೆದಿದೆ. ಹಾವು ಕಡಿದ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಕಾಲಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಮಟ್ಟನೂರು ಠಾಣೆಯ ಪೊಲೀಸ್ ಅಧಿಕಾರಿ ಅಶ್ವಿನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆಯಿತು. ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರು ನಾಯತ್ತುಪಾರ ಸಮೀಪದ ಕರಡಿ ಎಂಬ ಪ್ರದೇಶದ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆ ರಾಧಾ ಎಂಬುವರ ಕುತ್ತಿಗೆಯಲ್ಲಿದ್ದ 3 ಸವರನ್ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು. ತಕ್ಷಣ ರಾಧಾ ಅವರು ಸ್ಥಳೀಯ ಠಾಣೆಗೆ ಮಾಹಿತಿ ನೀಡಿ, ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಸರಗಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದರು. ಬಳಿಕ ಕೀಜಲ್ಲೂರಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಳ್ಳರನ್ನು ಬಂಧಿಸಲಾಯಿತು. ಒಬ್ಬ ಸರಗಳ್ಳನನ್ನು ಹಿಡಿದಾಗ, ಇನ್ನೊಬ್ಬ ಸಗರಳ್ಳ ಅರಣ್ಯದ ಕಡೆಗೆ ಓಡಿ ಹೋದ. ಈ ವೇಳೆ ಆತನನ್ನು ಹುಡುಕಿಕೊಂದು ಸ್ಥಳೀಯ ಜನರ ನೆರವಿನಿಂದ ಪೊಲೀಸ್ ಅಧಿಕಾರಿ ಅಶ್ವಿನ್ ಹೋದರು.
ಸರಗಳ್ಳನಿಗಾಗಿ ಅಶ್ವಿನ್ ಹುಡುಕಾಡುವಾಗ ಮೊದಲೇ ಅರಣ್ಯ ಪ್ರದೇಶವಾದ್ದರಿಂದ ಅಲ್ಲಿಯೇ ಇದ್ದ ನಾಗರ ಹಾವೊಂದು ಅಶ್ವಿನ್ ಅವರಿಗೆ ಕಚ್ಚಿದೆ. ತಕ್ಷಣ ಅಶ್ವಿನ್ ಅವರು ಕಣ್ಣೂರಿನ ಎಕೆಜಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ ಸೆರೆ ಸಿಕ್ಕಿರುವ ಓರ್ವ ಕಳ್ಳನ ವಿಚಾರಣೆ ನಡೆಯುತ್ತಿದೆ.