ತಿರುವನಂತಪುರ: ಕಾಸರಗೋಡಿನ ಎಂಡೋಸಲ್ಫಾನ್ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತೆ ದಯಾಬಾಯಿ ನಡೆಸುತ್ತಿದ್ದ ಅಮರಣಾಂತ ನಿರಾಹಾರ ಮುಷ್ಕರ ಅಂತ್ಯಗೊಳಿಸಲು ಸರ್ಕಾರ ಮನವಿ ಮಾಡಿದೆ.. ಧರಣಿ ಸಮಿತಿಯೊಂದಿಗೆ ಸಚಿವರು ನಡೆಸಿದ ಚರ್ಚೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಮುಖ ಬೇಡಿಕೆ ಈಡೇರಿಸಿದರೆ ಧರಣಿ ಅಂತ್ಯಗೊಳಿಸುವುದಾಗಿ ದಯಾಬಾಯಿ ತಿಳಿಸಿದ್ದಾರೆ ಎಂದು ಸಚಿವರಾದ ಆರ್.ಬಿಂದು ಮತ್ತು ವೀಣಾ ಜಾರ್ಜ್ ತಿಳಿಸಿದ್ದಾರೆ.
ಚರ್ಚೆಯ ನಂತರ ಸಚಿವರು ಪ್ರತಿಕ್ರಿಯಿಸಿ, ಪ್ರತಿಭಟನೆಯಲ್ಲಿ ಉಲ್ಲೇಖಿಸಲಾಗಿದ್ದ ಶೇ.90ರಷ್ಟು ಬೇಡಿಕೆಗಳನ್ನು ಜಾರಿಗೊಳಿಸಬಹುದು ಎಂದಿರುವರು. ನಿರಾಹಾರ ಸತ್ಯಾಗ್ರಹದಿಂದ ನಿತ್ರಾಣರಾಗಿ ಆಸ್ಪತ್ರೆಯಲ್ಲಿರುವ ದಯಾಬಾಯಿ ಅವರನ್ನು ಸಚಿವರು ಭೇಟಿ ಮಾಡಲಿದ್ದಾರೆ. ಧರಣಿ ಅಂತ್ಯಗೊಳಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಸಚಿವರು ಧರಣಿ ಸಮಿತಿಯೊಂದಿಗೆ ಚರ್ಚಿಸಿದರು.
ಎಂಡೋಸಲ್ಫಾನ್ ಪೀಡಿತರಿಗಾಗಿ ಪಂಚಾಯತಿಗಳಲ್ಲಿ ಡೇ ಕೇರ್ ಸೆಂಟರ್ ಸ್ಥಾಪಿಸುವುದು, ವೈದ್ಯಕೀಯ ಕಾಲೇಜು ಸ್ಥಾಪಿಸುವುದು ಮತ್ತು ಕಾಸರಕೋಡನ್ನು ಏಮ್ಸ್ ಪರಿಗಣನೆ ಪಟ್ಟಿಯಲ್ಲಿ ಸೇರಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದಯಾಬಾಯಿ ಮುಷ್ಕರ ನಡೆಸಿದರು.
ಚರ್ಚೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಕಾಸರಗೋಡು ಜಿಲ್ಲೆಯಲ್ಲಿ ಸರಕಾರ ಕೈಗೊಂಡಿರುವ ಕ್ರಮಗಳನ್ನು ಸಚಿವೆ ವಿವರಿಸಿದರು. 2017ರ ಜೂನ್ ನಲ್ಲಿ ಕಂದಾಯ ಮತ್ತು ವಸತಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸೆಲ್ ರಚಿಸಲಾಗಿತ್ತು. ಸ್ವಯಂಸೇವಾ ಸಂಸ್ಥೆಗಳು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಸಮನ್ವಯದಿಂದ ಸಂತ್ರಸ್ತ ಜನರ ಸಮಸ್ಯೆಗಳನ್ನು ಪರಿಹರಿಸುವುದು ಜಿಲ್ಲಾ ಮಟ್ಟದ ಸೆಲ್ ನ ಕಾರ್ಯವಾಗಿದೆ. ಪೀಡಿತ ಜನರನ್ನು ಗುರುತಿಸಲು ಜಿಲ್ಲೆಯಲ್ಲಿ 2011, 2013, 2017 ಮತ್ತು 2019 ರಲ್ಲಿ 38 ವೈದ್ಯಕೀಯ ಶಿಬಿರಗಳನ್ನು ನಡೆಸಲಾಗಿದೆ. ಇದರ ಭಾಗವಾಗಿ 6727 ಸಂತ್ರಸ್ತರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇವರ ಕಲ್ಯಾಣಕ್ಕಾಗಿ ಇಲ್ಲಿಯವರೆಗೆ ಒಟ್ಟು ರೂ.477,69,04,899 ಮಂಜೂರಾಗಿದೆ.
ಈ ವಿಚಾರದಲ್ಲಿ ಆರೋಗ್ಯ ಇಲಾಖೆ ಕೂಡ ಸರಿಯಾಗಿ ತೊಡಗಿಸಿಕೊಂಡಿದೆ ಎಂದು ಸರ್ಕಾರ ಹೇಳಿದೆ. ಜಿಲ್ಲೆಯಲ್ಲಿ ನರರೋಗ ತಜ್ಞರ ಹುದ್ದೆ ಸೃಷ್ಟಿಸಿ ಸೇವೆ ಲಭ್ಯವಾಗುವಂತೆ ಮಾಡಲಾಗಿದೆ. ಇದಲ್ಲದೆ, ಹೃದ್ರೋಗ ತಜ್ಞರು, ಕ್ಯಾಥ್ ಲ್ಯಾಬ್, ಸಿಸಿಯು ಮತ್ತು ಇಇಜಿ ಯಂತ್ರದ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ನವಜಾತ ಶಿಶು ನಿಗಾ ಘಟಕವನ್ನು ಆರಂಭಿಸಲಾಗಿದೆ. ನೆಗೆಟಿವ್ ಪ್ರೆಶರ್ ವ್ಯವಸ್ಥೆ ಇರುವ ಮಕ್ಕಳ ವಿಭಾಗವನ್ನು ಸ್ಥಾಪಿಸಲಾಗಿದೆ.ವೈದ್ಯಕೀಯ ಕಾಲೇಜಿಗೆ ಮಂಜೂರಾಗಿದ್ದ 272 ಹುದ್ದೆಗಳಲ್ಲಿ ಅರ್ಧದಷ್ಟು ಹುದ್ದೆಗಳು ಈಗ ಭರ್ತಿಯಾಗಿವೆ.
ಕಾಸರಗೋಡಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 2022 ರ ಜನವರಿ 3 ರಿಂದ ಒಪಿ ವಿಭಾಗ ಪ್ರಾರಂಭವಾಗಿದೆ. ನರರೋಗ ವಿಭಾಗ ಸೇರಿದಂತೆ ವಿಶೇಷ ಚಿಕಿತ್ಸೆ ಇಲ್ಲಿ ಲಭ್ಯವಿದೆ. ವೈದ್ಯಕೀಯ ಕಾಲೇಜಿಗೆ ಸರಕಾರ 160 ಕೋಟಿ ರೂ.ವಿನಿಯೋಗಿಸಿದೆ. ನೂತನ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಹಳೆ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು 23 ಕೋಟಿ ಮಂಜೂರಾಗಿದೆ. ವೈದ್ಯಕೀಯ ಕಾಲೇಜು ಮಂಜೂರಾದ 272 ಹುದ್ದೆಗಳ ಪೈಕಿ ಅರ್ಧದಷ್ಟು ಹುದ್ದೆಗಳನ್ನು ಈಗ ಭರ್ತಿ ಮಾಡಲಾಗಿದೆ. ಅತ್ಯಾಧುನಿಕ ಉಪಕರಣಗಳೊಂದಿಗೆ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯವನ್ನು ಪೂರ್ಣಗೊಳಿಸಲಾಗುತ್ತಿದೆ. ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ.
ಬೇಡಿಕೆಗಳನ್ನು ಅಂಗೀಕರಿಸಲಾಗುವುದು ಎಂದು ಭರವಸೆ: ದಯವಿಟ್ಟು ಮುಷ್ಕರ ಅಂತ್ಯಗೊಳಿಸಲು ದಯಾಬಾಯಿಗೆ ಸರ್ಕಾರದ ಮನವಿ
0
ಅಕ್ಟೋಬರ್ 16, 2022