ಬದನವಾಳು: 'ಅನ್ಯಾಯದ ವಿರುದ್ಧ ಮಹಾತ್ಮ ಗಾಂಧಿ ದೇಶವನ್ನು ಒಗ್ಗೂಡಿಸಿದಂತೆ ನಾವೂ ಭಾರತವನ್ನು ಒಗ್ಗೂಡಿಸುತ್ತೇವೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಪ್ರತಿಜ್ಞೆ ಮಾಡಿದರು.
ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ದೆಹಲಿಯ ರಾಜ್‌ಘಾಟ್‌ನಲ್ಲಿರುವ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರೆ, ಭಾರತ್ ಜೋಡೊ ಪಾದಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಅವರು ಮೈಸೂರು ಜಿಲ್ಲೆಯ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿರುವ ರಾಷ್ಟ್ರಪಿತನ ಪ್ರತಿಮೆಗೆ ನಮನ ಸಲ್ಲಿಸಿದರು.
'ಬಾಪು ಸತ್ಯ ಮತ್ತು ಅಹಿಂಸೆ ಮಾರ್ಗದಲ್ಲಿ ನಡೆಯುವುದನ್ನು ಕಲಿಸಿದ್ದಾರೆ. ಅವರು ಪ್ರೀತಿ, ಸಹಾನುಭೂತಿ, ಸಾಮರಸ್ಯ ಹಾಗೂ ಮಾನವೀಯತೆಯನ್ನು ನಮಗೆ ವಿವರಿಸಿದ್ದಾರೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ತಿಳಿಸಿದರು.
'1932ರಲ್ಲಿ ಬದನವಾಳುವಿನಲ್ಲಿ ಪ್ರಾರಂಭವಾದ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ರಾಹುಲ್ ಭೇಟಿ ನೀಡಿದ್ದಾರೆ. ಈ ಗ್ರಾಮಕ್ಕೆ ಮಹಾತ್ಮ ಗಾಂಧಿ ಅವರು 1927 ಹಾಗೂ 1932ರಲ್ಲಿ ಭೇಟಿ ನೀಡಿದ್ದರು, ಅಲ್ಲದೇ ಇಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರ ಸ್ಥಾಪಿಸಲು ಸಹಾಯ ಕೂಡ ಮಾಡಿದ್ದರು' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.