ಬೆಂಗಳೂರು: 'ಡೆಹ್ರಾಡೂನ್‌ನ ಉತ್ತರಕಾಶಿ ಬಳಿ ಹೋದ ವಾರ ಉಂಟಾಗಿದ್ದ ಹಿಮಪಾತದಿಂದಾಗಿ ಮೃತಪಟ್ಟಿದ್ದ ತರಬೇತಿ ನಿರತ ಪರ್ವತಾರೋಹಿಗಳಲ್ಲಿ ಕರ್ನಾಟಕದ ಡಾ.ಕೆ.ರಕ್ಷಿತ್ ಹಾಗೂ ಎಂ.ವಿಕ್ರಂ ಎಂಬುವರು ಸೇರಿದ್ದಾರೆ' ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
'ಉತ್ತರಕಾಶಿಯ ದ್ರೌಪದಿ ಕಾ ದಂಡ-2 ಶಿಖರ ಏರಿದ್ದ 29 ಮಂದಿಯನ್ನೊಳಗೊಂಡ ಪರ್ವತಾರೋಹಿಗಳ ತಂಡದಲ್ಲಿ ರಕ್ಷಿತ್ ಹಾಗೂ ವಿಕ್ರಂ ಅವರೂ ಇದ್ದರು. ಇವರಿಬ್ಬರು ಶಿಬಿರಾರ್ಥಿಗಳಾಗಿದ್ದರು' ಎಂದು ಹೇಳಿದ್ದಾರೆ.
'ರಕ್ಷಿತ್ ಹಾಗೂ ವಿಕ್ರಂ ಅವರ ಮೃತದೇಹಗಳನ್ನು ಭಾನುವಾರ ಪತ್ತೆ ಮಾಡಲಾಗಿದೆ' ಎಂದು ನೆಹರೂ ಪರ್ವತಾರೋಹಣ ಸಂಸ್ಥೆ (ಎನ್‌ಐಎಂ) ತಿಳಿಸಿದೆ.
ಇಬ್ಬರೂ ಎನ್‌ಐಎಂನಿಂದ ಆಯೋಜಿಸಲಾಗುವ 28 ದಿನಗಳ ಪ್ರಾಥಮಿಕ ಪರ್ವತಾರೋಹಣ ಕೋರ್ಸ್ ಪೂರ್ಣಗೊಳಿಸಿದ್ದರು. ಬಳಿಕ ಅಲ್ಲೇ 28 ದಿನಗಳ ಅಡ್ವಾನ್ಸ್ಡ್ ಮೌಂಟನೀರಿಂಗ್ ಕೋರ್ಸ್‌ಗೆ (ಎಎಂಸಿ) ದಾಖಲಾಗಿದ್ದರು.
ಬೆಂಗಳೂರಿನ ಶ್ರೀನಗರ ನಿವಾಸಿಯಾಗಿರುವ ರಕ್ಷಿತ್, ಮುಂದಿನ ವರ್ಷದ ಮೇ ತಿಂಗಳಿನಲ್ಲಿ ಮೌಂಟ್ ಎವರೆಸ್ಟ್ ಶಿಖರ ಏರುವ ಕನಸು ಹೊಂದಿದ್ದರು.
'ರಕ್ಷಿತ್, ದಿಟ್ಟ ಸಾಹಸಿಯಾಗಿದ್ದ. ಎಲ್ಲಾ ಬಗೆಯ ಕೌಶಲಗಳನ್ನೂ ಕರಗತಮಾಡಿಕೊಂಡಿದ್ದ. ಮೌಂಟ್ ಎವರೆಸ್ಟ್ ಶಿಖರ ಏರಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಈ ದುರ್ಘಟನೆಯಲ್ಲಿ ಆತ ಪ್ರಾಣವನ್ನೇ ಕಳೆದುಕೊಂಡ. ಅದರೊಂದಿಗೆ ಆತನ ಕನಸೂ ಕಮರಿಹೋಯಿತು' ಎಂದು ಸ್ನೇಹಿತ ಹಾಗೂ ಸಹ ಪರ್ವತಾರೋಹಿ ಪುರುಷೋತ್ತಮ ಎಂಬುವರು 'ಪ್ರಜಾವಾಣಿ'ಗೆ ತಿಳಿಸಿದರು.
'ವೈಟ್‌ಫೀಲ್ಡ್ ನಿವಾಸಿಯಾಗಿರುವ ವಿಕ್ರಂ ಕೂಡ ದೊಡ್ಡ ಕನಸೊಂದನ್ನು ಇಟ್ಟುಕೊಂಡು ಸ್ವಯಂ ಪ್ರೇರಿತವಾಗಿ ಎಎಂಸಿಗೆ ದಾಖಲಾಗಿದ್ದರು' ಎಂದು ಕರ್ನಾಟಕ ಪರ್ವತಾರೋಹಣ ಸಂಸ್ಥೆಯ (ಕೆಎಂಎ) ಮೂಲಗಳು ಹೇಳಿವೆ.
ಎನ್‌ಐಎಂನಲ್ಲಿ ತರಬೇತಿ ಪಡೆಯುತ್ತಿದ್ದ ತಂಡವು ಅಕ್ಟೋಬರ್ 4ರ ಮಂಗಳವಾರ ಬೆಳಿಗ್ಗೆ 8.45ರ ಸುಮಾರಿಗೆ ಪರ್ವತಾರೋಹಣ ಅಭ್ಯಾಸ ನಡೆಸಿ ಹಿಂತಿರುಗುತ್ತಿದ್ದಾಗ ಹಠಾತ್ತನೆ ಹಿಮಪಾತ ಉಂಟಾಗಿತ್ತು. ಹಿಮದಡಿ ಸಿಲುಕಿದ್ದ ನಾಲ್ವರ ಶವಗಳನ್ನು ಘಟನೆ ನಡೆದ ದಿನವೇ ಹೊರತೆಗೆಯಲಾಗಿತ್ತು. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ), ಜಮ್ಮು ಮತ್ತು ಕಾಶ್ಮೀರದ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್‌ನ 14 ಮಂದಿಯನ್ನೊಳಗೊಂಡ ತಂಡ, ಎಸ್‌ಡಿಆರ್‌ಎಫ್ ಮತ್ತು ಇಂಡೊ ಟಿಬೇಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ತಂಡಗಳು ಘಟನಾ ಸ್ಥಳದಲ್ಲಿ ನಿರಂತರವಾಗಿ ಶೋಧ ಕಾರ್ಯ ಕೈಗೊಂಡಿವೆ.