ಗಾಝಿಯಾಬಾದ್ : ಗಾಝಿಯಾಬಾದ್‌ನ ಮಹಿಳೆಯ ಸಾಮೂಹಿಕ ಅತ್ಯಾಚಾರ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಆಸ್ತಿ ವಿವಾದಕ್ಕೆ ಸಂಬಂಧಿಸಿ ಮಹಿಳೆ ಐವರ ವಿರುದ್ಧ ಸಾಮೂಹಿಕ ಅತ್ಯಾಚಾರದ ಆರೋಪ ಮಾಡಿದ್ದಾರೆ.
ತನ್ನನ್ನು ಐವರು ಅಪಹರಿಸಿದ್ದಾರೆ ಹಾಗೂ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಆದರೆ, ಘಟನೆ ನಡೆದ ಸಂದರ್ಭ ಆಕೆ ಇಬ್ಬರು ಸ್ನೇಹಿತರ ಜೊತೆ ಇದ್ದರು'' ಎಂದು ಉತ್ತರಪ್ರದೇಶದ ಪ್ರಾದೇಶಿಕ ಪೊಲೀಸ್ ವರಿಷ್ಠ ಪ್ರವೀಣ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ.
ಕೈ ಹಾಗೂ ಕಾಲುಗಳನ್ನು ಕಟ್ಟಿದ ಹಾಗೂ ಗುಪ್ತಾಂಗಕ್ಕೆ ಕಬ್ಬಿಣದ ಸರಳು ತೂರಿಸಿದ ಸ್ಥಿತಿಯಲ್ಲಿ 36 ವರ್ಷದ ಮಹಿಳೆ ಗೋಣಿ ಚೀಲದಲ್ಲಿ ಪತ್ತೆಯಾಗಿದ್ದಾರೆ ಎಂದು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷರಾಗಿರುವ ಸ್ವಾತಿ ಮಲಿವಾಲ್ ಅವರು ಟ್ವೀಟ್ ಮಾಡಿದ ಬಳಿಕ ಈ ಪ್ರಕರಣ ಪ್ರಾಮುಖ್ಯತೆ ಪಡೆದುಕೊಂಡಿತ್ತು ಹಾಗೂ ದಿಲ್ಲಿ ನಿವಾಸಿಯಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪೊಲೀಸರು ಐವರಲ್ಲಿ ನಾಲ್ವರನ್ನು ಬಂಧಿಸಿದ್ದರು ಹಾಗೂ ಪ್ರಕರಣ ದಾಖಲಿಸಿದ್ದರು. ಆದರೆ, ಆಸ್ತಿ ವಿವಾದದ ಆಯಾಮನ್ನು ಕೂಡ ಉಲ್ಲೇಖಿಸಿದ್ದರು. ಈ ನಡುವೆ ಮಹಿಳೆಯ ಗುಪ್ತಾಂಗಕ್ಕೆ ಗಾಯವಾಗಿದೆ ಎಂಬುದನ್ನು ದಿಲ್ಲಿ ಜಿಟಿಬಿ ಆಸ್ಪತ್ರೆಯ ವೈದ್ಯರು ನಿರಾಕರಿಸಿದ್ದರು.
ಗಾಝಿಯಾಬಾದ್‌ನಿಂದ ದಿಲ್ಲಿಗೆ ಸಂಪರ್ಕ ಕಲ್ಪಿಸುವ ಆಶ್ರಮ ರಸ್ತೆಯ ಬಳಿ ಮಹಿಳೆ ಪತ್ತೆಯಾದ ಸ್ಥಳದಲ್ಲಿಯೇ ಆಕೆಯ ಸ್ನೇಹಿತರೊಬ್ಬರು ಫೋನ್ ಸ್ವಿಚ್ ಆಫ್ ಮಾಡಿರುವುದನ್ನು
ಮೊಬೈಲ್ ಸಿಗ್ನಲ್ ಟ್ರ‍್ಯಾಕಿಂಗ್ ತೋರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ನೀಡಿದ ದೂರು ಐವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಲು ರೂಪಿಸಲಾಗಿದ್ದ ಸಂಚು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ ಆಕೆಯ ಮೂವರು ಸಹವರ್ತಿಗಳನ್ನು ಬಂಧಿಸಿದ್ದಾರೆ.