ನವದೆಹಲಿ: ಅನ್ಯಮತಗಳಿಗೆ ಮತಾಂತರಗೊಂಡವರಿಗೆ ಎಸ್ ಸಿ, ಸಮುದಾಯದ ಸ್ಥಾನಮಾನ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ನಿವೃತ್ತ ಸಿಜೆಐ ಕೆಜಿ ಬಾಲಕೃಷ್ಣನ್ ನೇತೃತ್ವದ ಸಮಿತಿಯನ್ನು ನೇಮಕ ಮಾಡಿದೆ.
ರಾಷ್ಟ್ರಪತಿಗಳ ಆದೇಶದಲ್ಲಿ ಉಲ್ಲೇಖವಾಗಿರುವುದನ್ನು ಹೊರತುಪಡಿಸಿದ ಧರ್ಮಗಳಿಗೆ ಯಾವುದೇ ವ್ಯಕ್ತಿ ಮತಾಂತರಗೊಂಡಿದ್ದರೂ, ತನ್ನನ್ನು ಐತಿಹಾಸಿಕವಾಗಿ ಪರಿಶಿಷ್ಟ ಜಾತಿ ಸೇರಿದವರು ಎಂದು ಹೇಳಿಕೊಳ್ಳುವವರಿಗೆ ಆ ಸ್ಥಾನಮಾನ ನೀಡಬೇಕೆ? ಬೇಡವೇ? ಎಂಬ ತಾಕಲಾಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ.
ಗೆಝೆಟ್ ನೋಟಿಫಿಕೇಷನ್ ನ ಪ್ರಕಾರ ತ್ರಿಸದಸ್ಯ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ.ರವೀಂದರ್ ಕುಮಾರ್ ಜೈನ್ ಹಾಗೂ ಯುಜಿಸಿ ಸದಸ್ಯ ಪ್ರೊಫೆಸರ್ ಸುಷ್ಮಾ ಯಾದವ್ ಇದ್ದಾರೆ. ಸಂವಿಧಾನದ ಪರಿಚ್ಛೇದ 341 ರ ಅಡಿಯಲ್ಲಿ ರಾಷ್ಟ್ರಪತಿಗಳು ಕಾಲಕಾಲಕ್ಕೆ ಹೊರಡಿಸಿರುವ ಆದೇಶದ ಆಧಾರದಲ್ಲಿ ಈ ವಿಷಯವನ್ನು ಸಮಿತಿ ಪರಿಶೀಲಿಸಲಿದೆ. ನಿರ್ಧಾರದ ಕುರಿತ ಪರಿಣಾಮಗಳ ಬಗ್ಗೆಯೂ ಸಮಿತಿ ಪರಿಶೀಲನೆ ನಡೆಸಲಿದೆ.