ಕಾಸರಗೋಡು: ಗ್ರಾಮವಾಸಿಗಳ ದುಗುಡ ದುಮ್ಮಾನಗಳಿಗೆ ಕಿವಿಯಾಗಲು ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮುಂದಾಗಿದ್ದು, ವಿವಿಧ ಗ್ರಾಮಾಧಿಕಾರಿ ಕಚೇರಿಗಳಿಗೆ ಭೇಟಿ ನೀಡಿ, ಜನರ ಅಹವಾಲು ಸ್ವೀಕರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಗ್ರಾಮ ಕಚೇರಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ಮತ್ತು ಸಲಹೆಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಈ ಹಿಂದೆ ತಿಳಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಚೆಂಗಳ ಗ್ರಾಮ ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿ ದಾಖಲೆಗಳನ್ನು ಪರಿಶೀಲಿಸಿದರು. ಈ ಹಿಂದೆ ಮುಟ್ಟತ್ತೋಡಿ ಪ್ರದೇಶದ ಜನತೆಗೆ ಜಮೀನು ನೀಡಿರುವ ವಿಚಾರದ ಬಗ್ಗೆ ದೂರು ಬಂದಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಯಿತು. ಚೆಂಗಳ ಗ್ರಾಮದ ಅತ್ಯಂತ ಬಡ ವರ್ಗಕ್ಕೆ ಸೇರಿದ ಎರಡು ಕುಟುಂಬಗಳನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಸಂಗ್ರಹಿಸಿದರು. ಚೆಂಗಳ ಗ್ರಾಮ ಕಚೇರಿಯನ್ನು ಸ್ಮಾರ್ಟ್ ವಿಲೇಜ್ ಕಚೇರಿಯನ್ನಾಗಿ ಪರಿವರ್ತಿಸುವ ಕುರಿತು ಗ್ರಾ.ಪಂ.ಅಧಿಕಾರಿಯೊಂದಿಗೆ ಚರ್ಚೆ ನಡೆಸಲಾಯಿತು. ಗ್ರಾಮ ಕಚೇರಿ ಆವರಣದಲ್ಲಿರುವ ಅಂಗನವಾಡಿಗೂ ಜಿಲ್ಲಾಧಿಕಾರಿ ಭೇಟಿ ನೀಡಿದರು.
ಮಧ್ಯಾಹ್ನ ಪಾಡಿ ಗ್ರಾಮ ಕಚೇರಿಗೆ ಭೇಟಿ ನೀಡಿ ಇಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಕಟ್ಟಡ ಪರಿಶೀಲಿಸಿದರು. ಇದೇ ಸಂದರ್ಭ ಪಾಡಿ ಗ್ರಾಮ ಕಛೇರಿ ವ್ಯಾಪ್ತಿಯ ಬಡ ವರ್ಗಕ್ಕೆ ಸೇರಿದ ನಾರಂಪಾಡಿಯ ಕುಟುಂಬಗಳನ್ನು ಜಿಲ್ಲಾಧಿಕಾರಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದರು. ಎಡನೀರು ಮಠದ ಬಳಿ ಚೆರ್ಕಳ-ಬದಿಯಡ್ಕ ರಸ್ತೆಯ ದೊಡ್ಡ ಹೊಂಡದಿಂದ ಅಪಘಾತ ಮರುಕಳಿಸುತ್ತಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಗ್ರಾಮೀಣ ಜನತೆಯ ದೂರು, ಸಲಹೆ ಕೇಳಲು ಗ್ರಾಮ ಕಚೇರಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ
0
ಅಕ್ಟೋಬರ್ 09, 2022