ನವದೆಹಲಿ: ಐತಿಹಾಸಿಕ ಸ್ಮಾರಕ ತಾಜ್ ಮಹಲ್‌ನ ಇತಿಹಾಸದ ಕುರಿತು 'ಸತ್ಯ ಶೋಧನಾ ತನಿಖೆ' ನಡೆಸಬೇಕು. ಭಾರತದ ಪ್ರಾಚ್ಯವಸ್ತು ಸಮೀಕ್ಷೆ ಸಂರಕ್ಷಿಸುತ್ತಿರುವ ಸ್ಮಾರಕದ 22 ಕೋಣೆಗಳ ಬಾಗಿಲುಗಳನ್ನು ತೆರೆಯುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಅಯೋಧ್ಯ ಬಿಜೆಪಿ ಮಾಧ್ಯಮ ಉಸ್ತುವಾರಿ ಎಂದು ಹೇಳಿಕೊಂಡಿರುವ ರಜನೀಶ್ ಸಿಂಗ್ ಎಂಬುವವರು ಮೊದಲಿಗೆ ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ಮೇ ತಿಂಗಳಿನಲ್ಲಿ ತಿರಸ್ಕರಿಸಿತ್ತು.
ಈ ಅರ್ಜಿಯನ್ನು ತಿರಸ್ಕರಿಸುವ ಮೂಲಕ ಹೈಕೋರ್ಟ್ ಯಾವುದೇ ಪ್ರಮಾದ ಎಸಗಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಎಂ.ಎಂ. ಸುಂದ್ರೇಶ್ ಅವರಿದ್ದ ಪೀಠ ಹೇಳಿದೆ.
ತಾಜ್ ಮಹಲ್ ಮೊದಲಿಗೆ ಶಿವ ದೇವಸ್ಥಾನವಾಗಿತ್ತು. ಅದನ್ನು ತೇಜೊ ಮಹಲ್ ಎಂದು ಕರೆಯಲಾಗುತ್ತಿತ್ತು ಎಂದು ಹಲವಾರು ಹಿಂದೂ ಸಂಘಟನೆಗಳು ಹೇಳಿವೆ. ಅದನ್ನು ಹಲವು ಇತಿಹಾಸಕಾರರು ಅನುಮೋದಿಸಿದ್ದಾರೆ. ಆದ್ದರಿಂದ ತನಿಖೆ ನಡೆಸಿ ಈ ವಿವಾದವನ್ನು ಕೊನೆಗಾಣಿಸಬೇಕು ಎಂದು ರಜನೀಶ್ ಅರ್ಜಿಯಲ್ಲಿ ಹೇಳಿದ್ದರು. ಜೊತೆಗೆ, ನಾಲ್ಕು ಅಂತಸ್ತಿನ ತಾಜ್ ಮಹಲ್ ಕಟ್ಟಡದ ಕೆಳ ಮತ್ತು ಮೇಲಿನ ಅಂತಸ್ತಿನಲ್ಲಿ ಒಟ್ಟು 22 ಕೋಣೆಗಳಿವೆ. ಅವನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.