ಕಾಸರಗೋಡು: ಜಿಲ್ಲೆಯಲ್ಲಿ ಮಾದಕದ್ರವ್ಯ ಸಾಗಾಟ ಮತ್ತು ಮಾರಾಟ ವ್ಯಾಪಕವಾಗಿ ಸದ್ದುಮಾಡುತ್ತಿದ್ದು, ವಿದ್ಯಾರ್ಥಿಗಳು ಸೇರಿದಂತೆ ಯುವಜನತೆ ಇದರ ದಾಸ್ಯರಾಗುತ್ತಿರುವುದು ಹೆತ್ತವರನ್ನು ಆತಂಕಕ್ಕೀಡುಮಾಡಿದೆ. ಗಾಂಜಾ, ಆ್ಯಶಿಷ್ ಆಯಿಲ್, ಎಂಡಿಎಂಎ, ಬ್ರೌನ್‍ಶುಗರ್ ಸೇರಿದಂತೆ ಮಾರಕ ಮಾದಕ ದ್ರವ್ಯಗಳು ಸುಲಭವಾಗಿ ಲಭ್ಯವಾಗುತ್ತಿದೆ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಮಾದಕ ದ್ರವ್ಯ ಮಾರಾಟದ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದು, ಇವುಗಳ ವಿರುದ್ಧ ಹೋರಾಟಕ್ಕೆ ಶಿಕ್ಷಣ ಇಲಾಖೆ ವಿಶೇಷ ಜಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಅಬಕಾರಿ, ಪೊಲೀಸ್, ಸೇರಿದಂತೆ ವಿವಿಧ ಇಲಾಖೆಗಳೂ ಡ್ರಗ್ಸ್ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಶಾಲೆಗಳಲ್ಲಿ ರಕ್ಷಕ-ಶಿಕ್ಷಕರನ್ನೊಳಗೊಂಡ ಡ್ರಗ್ಸ್ ವಿರೋಧಿ ಸಮಿತಿ ರಚಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
'ನೋ ಟು ಡ್ರಗ್ಸ್'-ಕಾರಾಗೃಹದಲ್ಲೂ ಅಭಿಯಾನ:
ಹೊಸದುರ್ಗ ಜಿಲ್ಲಾ ಕಾರಾಗೃಹದ ಕೈದಿಗಳು ಮಾದಕ ದ್ರವ್ಯ ವಿರೋಧಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆಯ ವಿರುದ್ಧ ಜಿಲ್ಲಾ ಕಾರಾಗೃಹದ ಕೈದಿಗಳು ಇಟ್ಟಿಗೆ ಹಾಗೂ ಇತರ ತ್ಯಾಜ್ಯ ಬಳಸಿಕೊಂಡು ಜೈಲಿನ ಉದ್ಯಾನದಲ್ಲಿ 'ನೋ ಟು ಡ್ರಗ್ಸ್' ಎಂಬ ಬರೆಹ ಬರೆದಿದ್ದಾರೆ. ಹಸಿರು ಕೇರಳ ಮಿಷನ್ ಮತ್ತು ಕಾಞಂಗಾಡ್ ರೋಟರಿ ಕ್ಲಬ್‍ನ ಸಹಕಾರದೊಂದಿಗೆ ಕೈದಿಗಳೇ ಈ ಕೆಲಸ ನಿರ್ವಹಿಸಿದ್ದಾರೆ.
ಈ ಹಿಂದೆ, ಕೈದಿಗಳು 'ಯುದ್ಧ ಬೇಡ' ಎಂಬ ಯುದ್ಧ ವಿರೋಧಿ ಸಂದೇಶಗಳನ್ನು ಸಿದ್ಧಪಡಿಸುವ ಮೂಲಕ ಗಮನ ಸೆಳೆದಿದ್ದರು. ಮಾದಕ ವ್ಯಸನದ ವಿರುದ್ಧ ಕೈದಿಗಳಿಗೆ ಇಲ್ಲಿ ಪ್ರತಿ ತಿಂಗಳು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕುಟುಂಬಶ್ರೀ ವತಿಯಿಂದ ಮಾದಕ ವ್ಯಸನಿ ಕೈದಿಗಳಿಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯ ಮಾರಾಟ: ಡ್ರಗ್ಸ್ ವಿರೋಧಿ ಕಾರ್ಯಾಚರಣೆಗೆ ಕೈಜೋಡಿಸುತ್ತಿರುವ ಜನತೆ: ಕೈದಿಗಳಿಂದಲೂ ಅಭಿಯಾನ
0
ಅಕ್ಟೋಬರ್ 05, 2022