ಗುವಾಹತಿ: ಅರುಣಾಚಲ ಪ್ರದೇಶದ ಅಂಜವ್ ಜಿಲ್ಲೆಯ ಇಬ್ಬರು ಬಾಲಕರು ಚೀನಾ ಗಡಿಯಲ್ಲಿ ನಾಪತ್ತೆಯಾಗಿ 56 ದಿನಗಳು ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಚೀನಾ ಗಡಿಯಲ್ಲಿರುವ ಆಳವಾದ ಪರ್ವತ ಶ್ರೇಣಿಯ ಕಾಡುಗಳಲ್ಲಿ ಔಷಧೀಯ ಗಿಡಮೂಲಿಕೆಗಳು ತರಲು ಹೋಗಿದ್ದು, ಇವರು ವಾಸ್ತವ ನಿಯಂತ್ರಣ ರೇಖೆ ದಾಟಿರಬೇಕು ಎಂದು ಶಂಕಿಸಲಾಗಿದೆ.
ಈ ಸಂಬಂಧ ಭಾರತೀಯ ಸೇನೆ, ಎಸ್‍ಐಬಿ ಮತ್ತು ಇತರ ಭದ್ರತಾ ಏಜೆನ್ಸಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅಂಜವ್ ಎಸ್ಪಿ ರಿಕ್ ಕಮ್ಶಿ (Anjaw SP Rike Kamsi) ಹೇಳಿದ್ದಾರೆ.
"ಅಕ್ಟೋಬರ್ 9ರಂದು ಈ ಬಾಲಕರ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಯುರ್ವೇದ ಗಿಡಮೂಲಿಕೆಗಳನ್ನು ತರಲು ಅವರು ಗಡಿ ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದರು. ಅವರು ತಿಳಿಯದೇ ವಾಸ್ತವ ನಿಯಂತ್ರಣ ರೇಖೆ ದಾಟಿರುವ ಸಾಧ್ಯತೆ ಇದೆ" ಎಂದು ವಿವರಿಸಿದ್ದಾರೆ.
ಬೆಟಾಲಿಯಮ್ ಟಿಕ್ರೊ ಹಾಗೂ ಬಯಿಂಗ್ಸೊ ಮನ್ಯು ಆಗಸ್ಟ್ 19ರಂದು ಅಂತರರಾಷ್ಟ್ರೀಯ ಗಡಿ ಸಮೀಪದ ಚಲ್ಗಾಗಾಂಮ್‍ಗೆ ತೆರಳಿದ್ದರು. ಎರಡು ತಿಂಗಳಿನಿಂದ ಕುಟುಂಬದವರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅವರ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಗಡಿಯನ್ನು ತಲುಪಲು ಹವಾಮಾನ ಮತ್ತು ವೇಗವನ್ನು ಆಧರಿಸಿ ಕನಿಷ್ಠ ಆರರಿಂದ ಎಂಟು ದಿನ ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಜನವರಿಯಲ್ಲಿ 19 ವರ್ಷ ವಯಸ್ಸಿನ ಮಿರಾಮ್ ತರೂನ್ ಎಂಬ ಯುವಕ ಆಕಸ್ಮಿಕವಾಗಿ ಚೀನಿ ಗಡಿಯೊಳಕ್ಕೆ ಪ್ರವೇಶಿಸಿದ್ದ. ಆತನನ್ನು ಚೀನಾದ ಪಿಎಲ್‍ಎ ಹಿಡಿದು 10 ದಿನಗಳ ಬಳಿಕ ಭಾರತಕ್ಕೆ ಒಪ್ಪಿಸಿತ್ತು ಎಂದು ಈ ಬಗ್ಗೆ timesofindia.com ವರದಿ ಮಾಡಿದೆ.