ಮಂಜೇಶ್ವರ : ಕೇರಳವೂ ಸೇರಿದಂತೆ ದೇಶದ ಹಲವು ರಾಜ್ಯಗಳು ಈಗ ಎದುರಿಸುತ್ತಿರುವ ಪಿಡುಗು ಎಂದರೆ ಮಾದಕ ದ್ರವ್ಯ ಸೇವನೆಯಲ್ಲಿ ಯುವ ಜನತೆ ದಾರಿ ತಪ್ಪುತ್ತಿರುವುದು. ಈ ಪಿಡುಗು ಇದೀಗ ಶಾಲಾ ಮಕ್ಕಳ ಬುಡಕ್ಕೂ ಕಾಲಿಟ್ಟಿದ್ದು ಎಲ್ಲರಲ್ಲೂ ಆತಂಕವನ್ನು ಹುಟ್ಟು ಹಾಕಿದೆ. ಇದರ ಹಿಂದೆ ದೊಡ್ಡ ಜಾಲವೇ ಇದ್ದು, ಇದನ್ನು ನಿರ್ನಾಮ ಮಾಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಮಾದಕ ದ್ರವ್ಯ ಮುಕ್ತ ಕೇರಳ ರಾಜ್ಯವನ್ನಾಗಿ ಮಾಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರು ನೆರವೇರಿಸಿದ ಉದ್ಘಾಟನಾ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸುವ ವ್ಯವಸ್ಥೆ ಕುಳೂರು ಶಾಲೆಯಲ್ಲಿ ಮಾಡಲಾಯಿತು.
ಬಳಿಕ ಶಾಲಾ ಮಟ್ಟದ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣ ಉದ್ಘಾಟಿಸಿದರು. ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಹಾಸಿನಿ ಕುಳೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಬಿ.ಆರ್.ಸಿ ಯ ಸಿ.ಆರ್.ಸಿ ಕೊ-ಆರ್ಡಿನೇಟರ್ ಮೀನಾಕ್ಷಿ ಬೊಡ್ಡೋಡಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಜಯ ಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು.
ಬಳಿಕ ರಕ್ಷಕರಿಗೆ ಹಾಗೂ ಶಾಲಾ ಮಕ್ಕಳಿಗೆ ವಿಶೇಷ ತರಗತಿಯನ್ನು ಶಾಲಾ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ಶರ್ಮ ನಡೆಸಿಕೊಟ್ಟರು. ರಕ್ಷಕರಿಂದ ಹಾಗೂ ಶಾಲಾ ಮಕ್ಕಳಿಂದ ಮಾದಕ ವಸ್ತುಗಳ ವಿರುದ್ಧವಾಗಿ, ಜನರಲ್ಲಿ ಜಾಗೃತಿ ಮೂಡಿಸಲು ಭಿತ್ತಿ ಪತ್ರ ರಚನೆ ಮಾಡಿಸಲಾಯಿತು. ಈ ಭಿತ್ತಿ ಪತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವುದು ಎಂದು ತೀರ್ಮಾನಿಸಿ, ಮುನ್ನಡೆಯಲಾಯಿತು. ಜೊತೆಗೆ ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞೆ ಸ್ವೀಕರಿಸಲಾಯಿತು. ಶಾಲಾ ಶಿಕ್ಷಕ ವೃಂದ ಸಹಕರಿಸಿದರು.
ಮಾದಕ ದ್ರವ್ಯ ಮುಕ್ತ ಕೇರಳ ಅಭಿಯಾನ: ಕುಳೂರು ಶಾಲಾ ಮಟ್ಟದ ಉದ್ಘಾಟನೆ
0
ಅಕ್ಟೋಬರ್ 08, 2022