ನವದೆಹಲಿ : ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪತ್ರಕರ್ತೆ ರಾಣಾ ಆಯೂಬ್ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಆರೋಪಪಟ್ಟಿಯನ್ನು ಬುಧವಾರ ಸಲ್ಲಿಸಿದೆ. ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದ್ದ ₹2.69 ಕೋಟಿಯನ್ನು ಅವರು ಸ್ವಂತಕ್ಕೆ ಬಳಿಸಿದ್ದಾರೆ ಮತ್ತು ವಿದೇಶಿ ದೇಣಿಗೆ ನಿಯಮವನ್ನು ಅವರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್‌ಎ) ವಿಶೇಷ ಕೋರ್ಟ್‌ನಲ್ಲಿ ಇ.ಡಿ ಈ ಆರೋಪಪಟ್ಟಿ ಸಲ್ಲಿಸಿದೆ.
ರಾಣಾ ಆಯೂಬ್ ಅವರು ಕೆಟ್ಟೊ 'ಪ್ಲಾಟ್‌ಫಾರ್ಮ್' ವೇದಿಕೆ ಮೂಲಕ 2020ರ ಏಪ್ರಿಲ್‌ನಿಂದ ಇಲ್ಲಿಯವರೆಗೆ ಸುಮಾರು ಮೂರು ಬಾರಿ ದೇಣಿಗೆ ಸಂಗ್ರಹ ಅಭಿಯಾನ ನಡೆಸಿದ್ದಾರೆ. ಅದರಿಂದ ₹2.69 ಕೋಟಿ ಸಂಗ್ರಹವಾಗಿದೆ. ಈ ಹಣದಲ್ಲಿ ₹29 ಲಕ್ಷ ಮಾತ್ರ ದತ್ತಿ ಕೆಲಸಗಳಿಗೆ ಬಳಕೆ ಆಗಿದೆ. ಬಾಕಿ ಹಣವನ್ನು ರಾಣಾ ಅವರೇ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗುರುವಾರ ಹೊರಡಿಸಿರುವ ಪ್ರಕಟಣೆಯಲ್ಲಿ ಇ.ಡಿ ತಿಳಿಸಿದೆ.
ಅಸ್ಸಾಂ, ಬಿಹಾರ, ಮಹಾರಾಷ್ಟ್ರದ ಕೊಳಗೇರಿಯಲ್ಲಿ ವಾಸಿಸುಸುವವರು ಮತ್ತು ರೈತರಿಗೆ ನೆರವು ನೀಡಲು ಹಾಗೂ ಕೋವಿಡ್‌ನಿಂದ ಸಂಕಷ್ಟಕ್ಕೀಡಾಗಿರುವವರಿಗೆ ನೆರವು ನೀಡಲು ದೇಣಿಗೆ ಸಂಗ್ರಹಿಸಲಾಗಿತ್ತು. ದೇಣಿಗೆ ಹಣವನ್ನು ರಾಣಾ ಅವರ ತಂದೆ ಮತ್ತು ಸಹೋದರಿಯ ಬ್ಯಾಂಕ್ ಖಾತೆಗಳ ಮೂಲಕ ಸ್ವೀಕರಿಸಲಾಗುತ್ತಿತ್ತು. ನಂತರ ಈ ಹಣವನ್ನು ರಾಣಾ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಇ.ಡಿ ಆರೋಪಿಸಿದೆ.