ನವದೆಹಲಿ: ದೇಶದ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಈಗ 'ವಿವಿಧ ಕ್ಷೇತ್ರಗಳ ಪರಿಣಿತ ಪ್ರಾಧ್ಯಾಪಕ'ರನ್ನು (ಪ್ರೊಫೆಸರ್ಸ್ ಆಫ್ ಪ್ರಾಕ್ಟೀಸ್) ನೇಮಕ ಮಾಡಿಕೊಳ್ಳಬಹುದಾಗಿದೆ.
'ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಪರಿಣಿತ ಪ್ರಾಧ್ಯಾಪಕರು' ಕೆಟಗರಿಯಡಿ ಈ ನೇಮಕಾತಿ ಮಾಡಲು ಅವಕಾಶ ನೀಡಲಾಗಿದೆ.
ಔಪಚಾರಿಕ ಶೈಕ್ಷಣಿಕ ಅರ್ಹತೆ ಮತ್ತು ಅಗತ್ಯಸಂಖ್ಯೆಯಷ್ಟು ಸಂಶೋಧನಾ ಕೃತಿಗಳನ್ನು ಪ್ರಕಟಿಸಬೇಕು ಎಂಬ ಅರ್ಹತೆಗಳು ಈ ಕೆಟಗರಿಯಡಿ ನೇಮಕವಾಗುವವರಿಗೆ ಕಡ್ಡಾಯವಾಗಿರುವುದಿಲ್ಲ.
ಈ ಕುರಿತು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಈ ಸಂಬಂಧ ಶುಕ್ರವಾರ ಅಧಿಸೂಚನೆ ಪ್ರಕಟಿಸಿದೆ.ಈ ನೂತನ ಮಾರ್ಗಸೂಚಿಗಳ ಪ್ರಕಾರ, ಎಂಜಿನಿಯರಿಂಗ್, ವಿಜ್ಞಾನ, ಮಾಧ್ಯಮ, ಸಾಹಿತ್ಯ, ಉದ್ಯಮಶೀಲತೆ, ಸಮಾಜವಿಜ್ಞಾನ, ಲಲಿತಕಲೆ, ನಾಗರಿಕ ಸೇವೆಗಳು ಹಾಗೂ ಭದ್ರತಾಪಡೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ತಜ್ಞರು 'ಪರಿಣಿತ ಪ್ರಾಧ್ಯಾಪಕರು' ಕೆಟಗರಿಯಡಿ ನೇಮಕವಾಗಲು ಅರ್ಹತೆ ಹೊಂದಲಿದ್ದಾರೆ.
''ಪರಿಣಿತ ಪ್ರಾಧ್ಯಾಪಕರ' ಸಂಖ್ಯೆಯು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಮಂಜೂರಾದ ಒಟ್ಟು ಹುದ್ದೆಗಳ ಶೇ 10ರಷ್ಟಿಕ್ಕಿಂತ ಹೆಚ್ಚಿರಬಾರದು. ಉದ್ದಿಮೆಗಳಿಂದ ಹಣಕಾಸು ನೆರವು ಹೊಂದಿರುವ, ಸಂಸ್ಥೆಗಳೇ ಸಂಪನ್ಮೂಲ ಭರಿಸುತ್ತಿರುವ ಹಾಗೂ ಗೌರವ ಬೋಧಕರ ವರ್ಗಗಳಡಿ 'ಪರಿಣಿತ ಪ್ರಾಧ್ಯಾಪಕರ'ನ್ನು ನೇಮಕ ಮಾಡಿಕೊಳ್ಳಬೇಕು. ಈ 'ಪ್ರಾಧ್ಯಾಪಕ'ರ ಸೇವಾವಧಿ ಮೂರು ವರ್ಷ ಮೀರಬಾರದು. ವಿಶೇಷ ಸಂದರ್ಭಗಳಲ್ಲಿ ಮಾತ್ರ ಒಂದು ವರ್ಷದ ವರೆಗೆ ಸೇವಾವಧಿಯನ್ನು ವಿಸ್ತರಿಸಬಹುದು ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.
ವಿದೇಶಗಳಲ್ಲಿನ ಹಲವಾರು ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ 'ಪರಿಣಿತ ಪ್ರಾಧ್ಯಾಪಕರ'ನ್ನು ನೇಮಕ ಮಾಡಿಕೊಳ್ಳುವ ಪರಿಪಾಟ ಇದೆ. ಭಾರತದಲ್ಲಿ ದೆಹಲಿ, ಮದ್ರಾಸ್ ಹಾಗೂ ಗುವಾಹಟಿ ಐಐಟಿಗಳಲ್ಲಿ ಸಹ ಇಂಥ ನೇಮಕಾತಿ ರೂಢಿಯಲ್ಲಿದೆ.