ದುಬೈ : ಧಾರ್ಮಿಕ ವಸ್ತ್ರಸಂಹಿತೆಯ ಕಟ್ಟುಪಾಡು ವಿರೋಧಿಸಿ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರ ಇನ್ನಷ್ಟು ತೀವ್ರಗೊಂಡಿದೆ. ರಸ್ತೆಗಳಲ್ಲಿ ಗುಂಡಿನ ಮೊರೆತ ಸಾಮಾನ್ಯವಾಗಿದೆ. ಮಂಗಳವಾರವು ಭದ್ರತಾ ಸಿಬ್ಬಂದಿ ಹಾರಿಸಿದ ಗುಂಡಿಗೆ ಪ್ರತಿಭಟನಕಾರನೊಬ್ಬರು ಮೃತಪಟ್ಟಿದ್ದಾರೆ.
ನಗರ, ಪಟ್ಟಣ, ಗ್ರಾಮಗಳಿಗೂ ಪ್ರತಿಭಟನೆ ವ್ಯಾಪ್ತಿಸಿದೆ. ಧಾರ್ಮಿಕ ವಸ್ತ್ರಸಂಹಿತೆ ಉಲ್ಲಂಘಿಸಲಾಗಿದೆ ಎಂದು ಟೆಹರಾನ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ 22 ವರ್ಷದ ಮಹಿಳೆ ಮಾಶಾ ಅಮೈನಿ ಅವರ ಶಂಕಾಸ್ಪದ ಸಾವಿನ ಹಿಂದೆಯೇ ಸೆ. 17ರಿಂದ ಇರಾನ್‌ನಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ.
ಹಿಂಸಾತ್ಮಕ ಘಟನೆಗಳು, ಭದ್ರತಾ ಸಿಬ್ಬಂದಿ ಗುಂಡಿನಿಂದ ಎಷ್ಟು ಮಂದಿ ಪ್ರತಿಭಟನಕಾರರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಅಧಿಕೃತ ಟಿ.ವಿ. ಮಾಧ್ಯಮದ ವರದಿ ಅನುಸಾರ ಸೆ.24ರಲ್ಲಿ ಇದ್ದಂತೆ 41 ಮಂದಿ ಮೃತಪಟ್ಟಿದ್ದರು. ಆ ನಂತರದ ಸಾವುಗಳ ಕುರಿತ ವರದಿಗಳನ್ನು ಸರ್ಕಾರ ಖಚಿತಪಡಿಸಿಲ್ಲ.
ವರದಿಗಳ ಪ್ರಕಾರ, ಸಲಸ್ ಬಾಬಾಜಾನಿ ಗ್ರಾಮದಲ್ಲಿ ಭದ್ರತಾ ಸಿಬ್ಬಂದಿಯ ಗುಂಡಿನಿಂದ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಒಸ್ಲೊ ಮೂಲದ ಮಾನವ ಹಕ್ಕುಗಳ ಸಂಘಟನೆ ಪ್ರಕಾರ, ಈವರೆಗೆ ಸುಮಾರು 185 ಜನರು ಸತ್ತಿದ್ದಾರೆ. ಈ ಪೈಕಿ ಝೆಹೆದಾನ್ ನಗರದಲ್ಲಿಯೇ ಹಿಂಸಾ ಕೃತ್ಯಗಳಿಂದ ಸುಮಾರು 90 ಜನ ಮೃತಪಟ್ಟಿದ್ದಾರೆ.
ಅಮೈನಿ ಅವರ ಮೇಲೆ ಪೊಲೀಸರು ದೌರ್ಜನ್ಯ ಎಸಗಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ. ಆದರೆ, ಹಿಜಾಬ್ ಧರಿಸುವ ಕುರಿತಂತೆ ಅವರು ಸಂಘರ್ಷ ನಡೆಸಿರುವ ವಿಡಿಯೊಗಳು ಹರಿದಾಡಿದ್ದು, ಪೊಲೀಸರು ದೈಹಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಅಭಿಪ್ರಾಯ ದಟ್ಟವಾಗಿದೆ.
ಇರಾನ್‌ನ ರಾಜಧಾನಿ ಕುರ್ದಿಸ್ತಾನ್ ಪ್ರಾಂತ್ಯದ ಸನಾಂಡೈ ಪಟ್ಟಣ ಮತ್ತು ಸಲಸ್ ಬಾಬಾಜಾನಿ ಗ್ರಾಮದಲ್ಲಿ ಸೋಮವಾರವೂ ಹಿಂಸಾಚಾರ ಕಾಣಿಸಿಕೊಂಡಿತ್ತು ಎಂದು ಕುರ್ದಿಶ್ ಗುಂಪಿನ ಮಾನವಹಕ್ಕುಗಳ ಸಂಘಟನೆ ಹೆಂಗಾವ್ ಹೇಳಿದೆ. ಜನ ಗಾಯಗೊಂಡಿದ್ದಾರೆಯೇ ಎಂಬ ಬಗ್ಗೆ ತಕ್ಷಣದ ಮಾಹಿತಿ ಇಲ್ಲ. ಆದರೆ, ಗುಂಡು ಹಾರಿಸಿರುವ ಹಾಗೂ ಅಶ್ರುವಾಯು ಸಿಡಿಸಿರುವ ದೃಶ್ಯಗಳು ವಿಡಿಯೊದಲ್ಲಿ ದಾಖಲಾಗಿದೆ.
ಕುರ್ದಿಸ್ತಾನ್ ಪ್ರಾಂತ್ಯದ ಗವರ್ನರ್ ಇಸ್ಮಾಯಿಲ್ ಝರೇ ಕೌಶಾ ಅವರು, ಕೆಲ ಸಂಘಟನೆಗಳು ರಸ್ತೆಯಲ್ಲಿಯೇ ಯುವಜನರನ್ನು ಕೊಲ್ಲಲು ಸಂಚು ನಡೆಸಿವೆ ಎಂದು ಆರೋಪಿಸಿದ್ದಾರೆ. ಅಪರಿಚಿತ ಗುಂಪುಗಳು ಹಿಂಸಾಕೃತ್ಯದಲ್ಲಿ ತೊಡಗಿವೆ. ಆದರೆ, ಭದ್ರತಾ ಸಿಬ್ಬಂದಿ ಮೇಲೆ ಆರೋಪ ಹೊರಿಸಲಾಗುತ್ತಿದೆ ಎಂದೂ ಹೇಳಿದ್ದಾರೆ.
ವಾಹನಗಳ ಹಾರ್ನ್‌ನಿಂದ ಜೋರಾದ ಶಬ್ಧ ಹೊರಡಿಸುವ ಮೂಲಕ ಜನರು ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರನ್ನು ಗುರಿಯಾಗಿಸಿ ಗುಂಪೊಂದು ಹಾರ್ನ್ ಮಾಡಿದ್ದರಿಂದ ಸನಾಂಡೈ ಪಟ್ಟಣದಲ್ಲಿ ರೊಚ್ಚಿಗೆದ್ದ ಪೊಲೀಸರು ಹಾದುಹೋಗುತ್ತಿದ್ದ ವಾಹನಗಳ ಗಾಜುಗಳನ್ನು ಒಡೆದಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ, ರಶ್ತ್ ನಗರದಲ್ಲಿನ ಲಖನ್ ಕಾರಾಗೃಹದಲ್ಲಿಯೂ ದೊಂಬಿ ನಡೆದಿದ್ದು, ಕೆಲ ವಿಚಾರಣಾಧೀನ ಕೈದಿಗಳು ಮೃತಪಟ್ಟಿದ್ದಾರೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಗಳಿದ್ದ ವಿಭಾಗದಲ್ಲಿ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಆದರೆ, ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.