ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವನ್ನು ಸ್ಫೋಟಿಸುವುದಾಗಿ ಶನಿವಾರ ಬೆದರಿಕೆ ಕರೆ ಬಂದ ನಂತರ ಮುಂಬೈನಿಂದ ಅಹ್ಮದಾಬಾದ್‌ಗೆ ತೆರಳಲಿದ್ದ ಇಂಡಿಗೋ ವಿಮಾನದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದು, ಯಾವುದೇ ಶಂಕಿತ ವಸ್ತು ಪತ್ತೆಯಾಗಲಿಲ್ಲ.
ಎಲ್ಲ ತಪಾಸಣೆಗಳನ್ನು ಪೂರ್ಣಗೊಳಿಸಿದ ಬಳಿಕ ವಿಮಾನವು ಯಾನವನ್ನು ಮುಂದುವರಿಸಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶನಿವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಲಾದ ಇಮೇಲ್‌ನಲ್ಲಿ ಇಂಡಿಗೋ ವಿಮಾನ 6ಇ 6045ರಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬರೆಯಲಾಗಿತ್ತು ಎಂದು ಅಧಿಕಾರಿಯೋರ್ವರು ತಿಳಿಸಿದರು.
ಇಮೇಲ್ ರವಾನಿಸಿದ್ದ ವ್ಯಕ್ತಿಯನ್ನು ಗುರುತಿಸಲು ಮತ್ತು ಪತ್ತೆ ಮಾಡಲು ಮುಂದಿನ ವಿಚಾರಣೆಗಳನ್ನು ನಡೆಸುತ್ತಿರುವುದಾಗಿ ಸಹಾರ್ ಪೊಲೀಸ್ ಠಾಣೆಯ ಸೀನಿಯರ್ ಇನ್ಸ್‌ಪೆಕ್ಟರ್ ಸಂಜಯ ಗೋವಿಲ್ಕರ್ ತಿಳಿಸಿದರು.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರದ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.