ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಆಡಳಿತರೂಢ ಬಿಜೆಪಿ 'ಗುಜರಾತ್ ಗೌರವ ಯಾತ್ರೆ' ಹಮ್ಮಿಕೊಂಡಿದೆ. ಬುಧವಾರದಿಂದ ಐದು ಮಾರ್ಗಗಳಲ್ಲಿ ಈ ಯಾತ್ರೆ ಸಂಚರಿಸಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ರಮವಾಗಿ ಬುಧವಾರ ಮತ್ತು ಗುರುವಾರ ಹೊರಡಲಿರುವ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
2002ರ ವಿಧಾನಸಭೆ ಚುನಾವಣೆ ಸಂದರ್ಭ ಅಂದಿನ ಸಿಎಂ ನರೇಂದ್ರ ಮೋದಿ ಅವರು ಮೊದಲ 'ಗೌರವ ಯಾತ್ರೆ'ಯನ್ನು ನಡೆಸಿದ್ದರು. ಇದು ಗುಜರಾತ್ ಗಲಭೆ ನಂತರ ನಡೆದ ಯಾತ್ರೆಯೂ ಹೌದು. ಬಳಿಕ 2017ರಲ್ಲಿ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಎರಡನೇ 'ಗೌರವ ಯಾತ್ರೆ' ನಡೆಸಲಾಗಿತ್ತು. ಎರಡು ಚುನಾವಣೆಗಳಲ್ಲಿ ಕ್ರಮವಾಗಿ 182 ಕ್ಷೇತ್ರಗಳ ಪೈಕಿ ಬಿಜೆಪಿ 127 ಮತ್ತು 99 ಸ್ಥಾನ ಗಳಿಸಿತ್ತು. 2017ರಲ್ಲಿ ಪ್ರತಿಪಕ್ಷ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ದೇಗುಲಗಳ ನಗರ ದ್ವಾರಕಾದಿಂದ ಹೊರಡುವ ಒಂದು ಮಾರ್ಗದ ಯಾತ್ರೆಗೆ ಬುಧವಾರ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ. ಮತ್ತೊಂದು ಮಾರ್ಗದ ಯಾತ್ರೆಯು ಮಹೆಸಾಣಾ ಜಿಲ್ಲೆಯ ಬೆಚರಾಜೀಯಿಂದ ಆರಂಭಗೊಳ್ಳಲಿದೆ. ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಯಾತ್ರೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಗುರುವಾರ ಯಾತ್ರೆಯು ಮೂರು ಮಾರ್ಗಗಳಲ್ಲಿ ಚಲಿಸಲಿದೆ. ಇದಕ್ಕೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್, ಮಾಜಿ ಸಿಎಂ ವಿಜಯ್ ರೂಪಾನಿ ಮತ್ತು ಮಾಜಿ ಸಚಿವ ಜವಾಹರ್ ಚಾವ್ಡಾ ಸೇರಿದಂತೆ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರು ವಿವಿಧ ಮಾರ್ಗಗಳಲ್ಲಿ ಸಾಗುವ ಯಾತ್ರೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.