ನವದೆಹಲಿ
:ಅನುಕಂಪದ ಆಧಾರದಲ್ಲಿ ಉದ್ಯೋಗ(Job) ಪಡೆಯುವುದನ್ನು ಹಕ್ಕು ಎಂದು ಪ್ರತಿಪಾದಿಸಲಾಗದು ಎಂದು ಸುಪ್ರೀಂಕೋರ್ಟ್(Supreme Court) ಮಹತ್ವದ ತೀರ್ಪು ನೀಡಿದೆ. ತಂದೆ 1995ರಲ್ಲಿ ಮೃತಪಟ್ಟ 14 ವರ್ಷಗಳ ಬಳಿಕ ಅನುಕಂಪದ ಆಧಾರದಲ್ಲಿ ನೇಮಕ ಮಾಡಲು ಸೂಚಿಸಬೇಕು ಎಂದು ಕೋರಿ ಮೃತ ವ್ಯಕ್ತಿಯ ಪುತ್ರಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸುವ ವೇಳೆ ಈ ಅಂಶವನ್ನು ಸ್ಪಷ್ಟಪಡಿಸಿದೆ.
ಮಹಿಳೆಯ ತಂದೆ ಕೇರಳ ಮೂಲದ ಫರ್ಟಿಲೈಸರ್ ಆಯಂಡ್ ಕೆಮಿಕಲ್ಸ್ ಟ್ರಾವಂಕೂರ್ ಲಿಮಿಟೆಡ್‍ನಲ್ಲಿ ಉದ್ಯೋಗದಲ್ಲಿದ್ದರು. ಅವರು ಮೃತಪಟ್ಟು 27 ವರ್ಷ ಕಳೆದಿದೆ. ಮಹಿಳೆಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವುದನ್ನು ಪರಿಗಣಿಸುವಂತೆ ಕೇರಳ ಹೈಕೋರ್ಟ್ ಕಳೆದ ಮಾರ್ಚ್ 31ರಂದು ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸುವ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠ ಹೈಕೋರ್ಟ್‍ನ ತೀರ್ಪನ್ನು ತಳ್ಳಿಹಾಕಿದ್ದು, "ಅನುಕಂಪದ ಆಧಾರದಲ್ಲಿ ನೇಮಕ ಮಾಡುವುದು ಒಂದು ವಿನಾಯ್ತಿಯೇ ವಿನಃ ಹಕ್ಕು ಅಲ್ಲ" ಎಂದು ಸ್ಪಷ್ಟಪಡಿಸಿದೆ.
ಸಾರ್ವಜನಿಕ ಸೇವೆಯ ಸಾಮಾನ್ಯ ನೇಮಕಾತಿ ನಿಯಮಾವಳಿಗೆ ಅನುಕಂಪದ ಆಧಾರದಲ್ಲಿ ಮಾಡುವ ನೇಮಕಾತಿ ಒಂದು ವಿನಾಯಿತಿ. ಮೃತಪಟ್ಟ ವ್ಯಕ್ತಿಯ ಅವಲಂಬಿತರಿಗೆ ಯಾವುದೇ ಜೀವನಾಧಾರ ಇಲ್ಲದಂತೆ ಆಗಬಾರದು ಎಂಬ ಕಾರಣಕ್ಕೆ ಈ ವಿನಾಯಿತಿ ನೀಡಲಾಗುತ್ತದೆ ಎಂದು ನ್ಯಾಯಮೂರ್ತಿಗಳು ವಿವರಿಸಿದ್ದಾರೆ.