ಕುಂಬಳೆ: ಸರೋವರ ಕ್ಷೇತ್ರವೆಂದೇ ಖ್ಯಾತಿಯಾದ ಕುಂಬಳೆ ಸಮೀಪದ ನಾಯ್ಕಾಪು ಬಳಿಯ ಅನಂತಪುರ ದೇವಸ್ಥಾನದ ಪವಾಡ ಸದೃಶ ಮೊಸಳೆ ಬಬಿಯಾ ಮೃತಪಟ್ಟಿದ್ದು, 75 ವರ್ಷವೆಂದು ಭಾವಿಸಲಾಗುವ ಈ ಮೊಸಳೆ ಭಾನುವಾರ ರಾತ್ರಿ ಸಾವನ್ನಪ್ಪಿದೆ. ಕುಂಬಳೆ ಅನಂತಪುರ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಸಸ್ಯಾಹಾರಿ ಬಬಿಯಾ ಎಂಬ ಮೊಸಳೆ ಭಕ್ತರಲ್ಲಿ ಭಕ್ತಸಾಂಧ್ರ ಪುಳಕ-ಅಚ್ಚರಿಗೆ ಸದಾ ಕಾರಣವಾಗಿತ್ತು.
ಕುಂಬಳೆ ಸಮೀಪದ ಈ ದೇವಾಲಯವು ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಮೂಲ ಕ್ಷೇತ್ರವಾಗಿದೆ. ಭಾರತದ ಏಕೈಕ ಸರೋವರ ದೇವಾಲಯವೂ ಹೌದು. 1945ರಲ್ಲಿ ದೇವಸ್ಥಾನದಲ್ಲಿದ್ದ ಮೊಸಳೆಯನ್ನು ಬ್ರಿಟೀμï ಸೈನಿಕನೊಬ್ಬ ಗುಂಡಿಕ್ಕಿ ಕೊಂದಿದ್ದ ಎನ್ನಲಾಗಿದೆ. ಬಬಿಯಾ ಕೆಲವೇ ದಿನಗಳಲ್ಲಿ ದೇವಾಲಯದ ಸರೋವರದಲ್ಲಿ ಮತ್ತೆ ಕಾಣಿಸಿಕೊಂಡಿತು ಎಂದು ನಂಬಲಾಗಿದೆ. ಬೆಳಗ್ಗೆ ಮತ್ತು ಮಧ್ಯಾಹ್ನದ ಪೂಜೆಯ ನಂತರ ಬಬಿಯಾಗೆ ಅನ್ನವನ್ನು ನೀಡಲಾಗುತ್ತದೆ. ಮೊಸಳೆಗೆ ನೈವೇದ್ಯ ಮಾಡುವುದು ಇಲ್ಲಿನ ಪ್ರಮುಖ ಸೇವೆ. ಭಕ್ತರು ತಮ್ಮ ಇಷ್ಟಾರ್ಥ ಅರ್ಪಿಸುತ್ತಾರೆ.
ಅರ್ಚಕರು ಬಬಿಯಾಗೆ ನೈವೇದ್ಯ ಅರ್ಪಿಸುತ್ತಾರೆ.ಬೇರೆ ಯಾರೂ ನೇರವಾಗಿ ಅರ್ಪಿಸುವ ಕ್ರಮವಿಲ್ಲ. ಅರ್ಚಕರ ಕರೆಗೆ ವಿಧೇಯನಾಗಿ ಬರುತ್ತಿದ್ದ ಮೊಸಳೆಗೆ ಎಲ್ಲರೂ ಬೆರಗಾಗುವರು. ಬಬಿಯಾ ಸರೋವರದ ಇತರ ಜೀವಿಗಳು ಮತ್ತು ಮೀನುಗಳಿಗೆ ಯಾವುದೇ ಹಾನಿ ಮಾಡದಿರುವುದು ವಿಶೇಷತೆ. ಮೊಸಳೆ ಸತ್ತಿದೆ ಎಂದು ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹಬ್ಬಿತ್ತು. ಬಬಿಯನ ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹಲವು ಬಾರಿ ವೈರಲ್ ಆಗಿವೆ.
ಇತಿಹಾಸ ಕಾಲದಿಂದಲೂ ಇಲ್ಲಿ ಮೊಸಲೆ ಇದ್ದಿರುವ ಬಗ್ಗೆ ಹಲವೆಡೆ ಇಲ್ಲೇಖಗಳಿದ್ದು, ದಿನನಿತ್ಯ ಶ್ರೀದೇವರ ದರ್ಶನದ ಜೊತೆಗೆ ಮೊಸಳೆ ಬಬಿಯನ ವೀಕ್ಷಿಸಲೆಂದೇ ಹಲವರು ಆಗಮಿಸುತ್ತಿದ್ದರು. ಆದರೆ ಬಹುತೇಕರಿಗೆ ಕಾಣಿಸುವುದೇ ಅಪೂರ್ವ. ಪ್ರತ್ಯಕ್ಷ ದೇವರೆಂದೇ ಸ್ಥಳೀಯರು ನಂಬುತ್ತಿದ್ದ ಬಬಿಯಾ ಇನ್ನು ನೆನಪು ಮಾತ್ರ.
ಗಣ್ಯರ ಆಗಮನ; ಸಮಾಧಿಗೆ ಸಿದ್ದತೆ:
ಬಬಿಯನ ನಿಧನ ವಾರ್ತೆ ತಿಳಿಯುತ್ತಿದ್ದಂತೆ ನೂರಾರು ಭಕ್ತರು ತಂಡೋಪತಂಡವಾಗಿ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿರುವರು. ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಯುವ ನೇತಾರರು, ಭಕ್ತರು, ದೇವಾಲಯದ ಆಡಳಿತ ಸಮಿತಿಯವರು ಭೇಟಿ ನೀಡಿ, ಸಮಾಲೋಚನೆ ನಡೆಸಿದ್ದು, ತಂತ್ರಿವರ್ಯರೂ ಆಗಮಿಸಿದ್ದು, ಸಕಲ ವೈದಿಕ ವಿಧಿಗಳೊಂದಿಗೆ ದಫನ ಪ್ರಕ್ರಿಯೆಗೆ ಸಿದ್ದತೆ ನಡೆಯುತ್ತಿದೆ.