ನವದೆಹಲಿ: ಜೆ.ಪಿ.ನಡ್ಡಾ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ 2024ರ ಲೋಕಸಭಾ ಚುನಾವಣೆವರೆಗೂ ಮುಂದುವರಿಸುವ ಸಾಧ್ಯತೆ ಇದೆ.
'ನಡ್ಡಾ (61) ಅವರ ಮೂರು ವರ್ಷಗಳ ಅಧಿಕಾರಾವಧಿಯು ಮುಂದಿನ ವರ್ಷದ ಜನವರಿಯಲ್ಲಿ ಕೊನೆಗೊಳ್ಳಲಿದೆ.
ಅದಕ್ಕೂ ಮುನ್ನವೇ ಬಿಜೆಪಿ ಸಂಸದೀಯ ಮಂಡಳಿಯು ನಡ್ಡಾ ಅವರನ್ನು ಈ ಹುದ್ದೆಯಲ್ಲಿ ಮುಂದುವರಿಸುವ ಕುರಿತ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ' ಎಂದು ಮೂಲಗಳು ತಿಳಿಸಿವೆ.
'ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆಗೂ ಮುನ್ನ ಕನಿಷ್ಠ ಅರ್ಧದಷ್ಟು ರಾಜ್ಯ ಘಟಕಗಳ ಚುನಾವಣೆ ಮುಕ್ತಾಯಗೊಳ್ಳಬೇಕು ಎಂಬ ನಿಯಮವಿದೆ. ಆದರೆ ರಾಜ್ಯ ಘಟಕಗಳ ಚುನಾವಣಾ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ. ಹೀಗಾಗಿ ನಡ್ಡಾ ಅವರ ಮುಂದುವರಿಕೆ ಹಾದಿ ಸುಗಮವಾಗಿದೆ' ಎಂದು ಹೇಳಿವೆ.
2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಹಿಂದೆ ಪಕ್ಷದ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರನ್ನೂ ಈ ಹುದ್ದೆಯಲ್ಲಿ ಮುಂದುವರಿಸಲಾಗಿತ್ತು.