ನವದೆಹಲಿ: 'ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನಗದು ನೀಡುವ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಕಪ್ಪುಹಣ ಅಥವಾ ದಾಖಲೆಯಿಲ್ಲದ ಹಣವನ್ನು ಈ ಮೂಲಕ ಪಕ್ಷಗಳು ಪಡೆಯಲು ಅವಕಾಶವಿಲ್ಲ' ಎಂದು ಕೇಂದ್ರ ಸರ್ಕಾರ ಹೇಳಿದೆ.
'ಬಾಂಡ್ ನೀಡುವ ಪ್ರತಿ ಹಂತದಲ್ಲಿಯೂ ಪಾರದರ್ಶಕತೆ ಇದೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ ಎಂಬ ವಾದದಲ್ಲಿ ಅರ್ಥವಿಲ್ಲ' ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಪೀಠಕ್ಕೆ ತಿಳಿಸಿದರು.
ಸಿಪಿಎಂ ಮತ್ತು ಅಸೋಸಿಯೇಷನ್ ಆಫ್ ಡೆಮಾಕ್ರಾಟಿಕ್ ರೀಫಾರ್ಮ್ಸ್ ಸಂಸ್ಥೆಯು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠವು ನಡೆಸುತ್ತಿದೆ.
ಎನ್‌ಜಿಒ ಅನ್ನು ಪ್ರತಿನಿಧಿಸಿದ್ದ ವಕೀಲ ಪ್ರಶಾಂತ್ ಭೂಷಣ್, 'ಇದು ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರಲಿದೆ' ಎಂದು ಪ್ರತಿಪಾದಿಸಿದರು. ಮತ್ತೊಬ್ಬ ವಕೀಲ ಕಪಿಲ್ ಸಿಬಲ್ ಅವರು, 'ಈ ಪ್ರಕರಣವನ್ನು ಉನ್ನತ ಪೀಠದ ವಿಚಾರಣೆಗೆ ಒಪ್ಪಿಸಬೇಕು' ಎಂದು ಕೋರಿದರು.
ಬಾಂಡ್ ಮೂಲಕ ಪಕ್ಷಗಳಿಗೆ ಹಣ ನೀಡಲು ಅವಕಾಶ ಕಲ್ಪಿಸುವ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ವಿವಿಧ ಅರ್ಜಿಗಳನ್ನು ಉನ್ನತ ಪೀಠದ ವಿಚಾರಣೆಗೆ ಒಪ್ಪಿಸುವ ಕುರಿತು ಡಿ.6ರಂದು ನಿರ್ಧರಿಸಲಾಗುವುದು ಎಂದು ತಿಳಿಸಿತು. 'ಇದೊಂದು ಮುಖ್ಯವಾದ ವಿಷಯ. ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರ ನೆರವನ್ನು ಬಯಸುತ್ತೇವೆ' ಎಂದೂ ಪೀಠ ತಿಳಿಸಿತು.
ಚುನಾವಣಾ ಬಾಂಡ್ ಯೋಜನೆ ಕುರಿತಂತೆ ಸರ್ಕಾರ ಜನವರಿ 2, 2018ರಲ್ಲಿ ಅಧಿಸೂಚನೆ ಹೊರಡಿಸಿದೆ. ಯೋಜನೆಯ ಪ್ರಕಾರ, ಯಾವುದೇ ಭಾರತೀಯ ಪ್ರಜೆ ಬಾಂಡ್ ಖರೀದಿಸಬಹುದು. ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕನಿಷ್ಠ ಶೇ 1ರಷ್ಟು ಮತ ಪಡೆದಿರುವ ನೋಂದಾಯಿತ ರಾಜಕೀಯ ಪಕ್ಷಗಳು ಇಂಥ ಬಾಂಡ್‌ಗಳನ್ನು ಸ್ವೀಕರಿಸಲು ಅರ್ಹವಾಗಿರುತ್ತವೆ.