ಚೆನ್ನೈ: ಇ-ಕಾಮರ್ಸ್ ಸೈಟ್‌ಗಳಲ್ಲಿ ನೀವು ಖರೀದಿಸಲು ಉದ್ದೇಶಿಸಿರುವ ಉತ್ಪನ್ನಗಳ ಕುರಿತು ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಮತ್ತು ಅದರ ಬಗ್ಗೆ ಓದುವುದು ನಿರ್ಧಾರ ತೆಗೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಆದರೆ, ಈಗ ಅತ್ಯಾಧುನಿಕ ತಂತ್ರಜ್ಞಾನವು ಗ್ರಾಹಕರಿಗೆ ಉತ್ಪನ್ನವನ್ನು ಸ್ಪರ್ಶಿಸಲು ಮತ್ತು ಅನುಭವಿಸಲು ಅನುವು ಮಾಡಿಕೊಡುತ್ತದೆ.
ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಅಭಿವೃದ್ಧಿಗೊಳಿಸಿದ ನೂತನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ತಂತ್ರಜ್ಞಾನ ಬಳಕೆದಾರರು ಬೆರಳುಗಳಿಂದ ಸ್ಪರ್ಶಿಸುತ್ತಾ ಹೋದಂತೆ ಚಿತ್ರಗಳ ವಿನ್ಯಾಸವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.
ಈ ನೂತನ ತಂತ್ರಜ್ಞಾನವನ್ನು 'ಐಟ್ಯಾಡ್' (ಐಟಿಎಡಿ) ಅಥವಾ ಇಂಟರ್ಯಾಕ್ಟಿವ್ ಟಚ್ ಆಯಕ್ಟಿವ್ ಡಿಸ್‌ಪ್ಲೇ ಎಂದು ಕರೆಯಲಾಗುತ್ತದೆ. ಇದು ಮುಂದಿನ ತಲೆಮಾರಿನ ಟಚ್ ಡಿಸ್‌ಪ್ಲೇ ಟೆಕ್ನಾಲಜಿ ಎಂದು ಮದ್ರಾಸ್ ಐಐಟಿಯ ಹೇಳಿಕೆ ತಿಳಿಸಿದೆ.
ಇಲ್ಲಿ ಸಾಪ್ಟ್‌ವೇರ್‌ಗಳನ್ನು ಬಳಸಿ ಸಂಶೋಧಕರು ಗರಿಗರಿಯಾದ ಅಂಚುಗಳನ್ನು ಸೃಷ್ಟಿಸಬಹುದು ಹಾಗೂ ನಯದಿಂದ ದೊರಗಿನ ವರೆಗಿನ ಎಲ್ಲ ಸಮೃದ್ಧ ವಿನ್ಯಾಸಗಳನ್ನು ರೂಪಿಸಲು ಸಾಧ್ಯ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.
ಐಟ್ಯಾಡ್‌ನಲ್ಲಿ ಯಾವುದೇ ಚಲನೆಯ ಭಾಗಗಳು ಇರುವುದಿಲ್ಲ. ಬದಲಾಗಿ ಅಂತರ್ಗತವಾಗಿರುವ ಟಚ್ ಸೆನ್ಸಾರ್ ಬೆರಳಿನ ಚಲನೆಯನ್ನು ಗುರುತಿಸುತ್ತದೆ ಹಾಗೂ ಸಾಫ್ಟ್‌ವೇರ್ ಮೂಲಕ ಮೇಲ್ಮೈ ಘರ್ಷಣೆಯನ್ನು ಸರಿಪಡಿಸುತ್ತದೆ ಎಂದು ಅದು ಹೇಳಿದೆ.
''ಇದು ಐಟ್ಯಾಡ್ ಯುಗ. ಈ ತಂತ್ರಜ್ಞಾನ ಆನ್‌ಲೈನ್ ಶಾಪಿಂಗ್ ಅನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲಿದೆ. ಇ-ಕಾಮರ್ಸ್ ವೇದಿಕೆಗಳಿಂದ ನಾವು ವಸ್ತುಗಳನ್ನು ಖರೀದಿಸುವ ಮುನ್ನ ಅದನ್ನು ಸ್ಪರ್ಶಿಸಬಹುದು ಹಾಗೂ ಅನುಭವಿಸಬಹುದು. ಖರೀದಿಸಿದ ವಸ್ತು ಆನ್‌ಲೈನ್‌ಲ್ಲಿ ನೋಡಿದಂತೆ, ಓದಿದಂತೆ ಇಲ್ಲದೇ ಇರುವ ಕಾರಣಕ್ಕೆ ಸುಮಾರು ಶೇ. 30 ವಸ್ತುಗಳನ್ನು ಗ್ರಾಹಕರು ಹಿಂದಿರುಗಿಸುತ್ತಾರೆ. ಆನ್‌ಲೈನ್‌ನಲ್ಲಿ ಚಿತ್ರಗಳನ್ನು ನೋಡುವ ಸಂದರ್ಭದ ಹಾಗೂ ಅದನ್ನು ಖರೀದಿಸಿದ ಬಳಿಕದ ಅವರ ಅನುಭವ ಭಿನ್ನವಾಗಿರುತ್ತದೆ'' ಎಂದು ಮದ್ರಾಸ್ ಐಐಟಿಯ ಅಪ್ಲೈಡ್ ಮೆಕಾನಿಕ್ಸ್ ವಿಭಾಗದ ಮುಖ್ಯ ಸಂಶೋಧಕ ಮಣಿವಣ್ಣನ್ ಅವರು ತಿಳಿಸಿದ್ದಾರೆ.