ಬ್ರಸೆಲ್ಸ್: ಕೋವಿಡ್ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಫೈಜರ್ ಸಂಸ್ಥೆ ತನ್ನ ಕೋವಿಡ್ ಲಸಿಕೆಯ 'ಸೋಂಕು ಹರಡುವಿಕೆ ತಡೆ ಪರೀಕ್ಷೆ' ನಡೆಸಿರಲಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಜಗತ್ತಿನಲ್ಲಿ ಲಭ್ಯವಿರುವ ವಿವಿಧ ಕೋವಿಡ್ ಲಸಿಕೆಗಳಲ್ಲಿ ಪ್ರಮುಖವಾಗಿರುವ ಫೈಜರ್ ಲಸಿಕೆಯನ್ನು ಮಾರುಕಟ್ಟೆಗೆ ಅಥವಾ ಜನರ ಬಳಕೆಗೆ ಬಿಡುವ ಮುನ್ನ 'ಸೋಂಕು ಹರಡುವಿಕೆ ತಡೆ ಪರೀಕ್ಷೆ' ನಡೆಸಿರಲಿಲ್ಲ ಎಂದು ಸ್ವತಃ ಫೈಜರ್ ಕಂಪನಿಯ ಹಿರಿಯ ಅಧಿಕಾರಿ ಜನೈನ್ ಸ್ಮಾಲ್ ಒಪ್ಪಿಕೊಂಡಿದ್ದಾರೆ.
ಯುರೋಪಿಯನ್ ಯೂನಿಯನ್ ಸಂಸತ್ತಿನಲ್ಲಿ ಜನೈನ್ ಸ್ಮಾಲ್ ತಪ್ಪೊಪ್ಪಿಕೊಂಡಿದ್ದು, ಫೈಜರ್ ಕೋವಿಡ್ ಲಸಿಕೆ ಮಾರುಕಟ್ಟೆಗೆ ಪ್ರವೇಶಿಸುವ ಮೊದಲು ವೈರಸ್ ಹರಡುವುದನ್ನು ನಿಲ್ಲಿಸಲು ಪರೀಕ್ಷೆ ಮಾಡಲಾಗಿತ್ತೆ? ಎಂದು ಡಚ್ ರಾಜಕಾರಣಿ ಮತ್ತು ಯುರೋಪಿಯನ್ ಸಂಸತ್ತಿನ ಹಾಲಿ ಸದಸ್ಯ ರಾಬರ್ಟ್ ರಾಬ್ ರೂಸ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಜನೈನ್ ಸ್ಮಾಲ್ ಹೇಳಿಕೆ ನೀಡಿದ್ದಾರೆ.
ಕೋವಿಡ್ ಹರಡದಂತೆ ಲಸಿಕೆ ತಡೆಯುತ್ತದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಮಾರುಕಟ್ಟೆಗೆ ಬಿಡುವ ಮುನ್ನ ನಾವು ಪರೀಕ್ಷಿಸಿರಲಿಲ್ಲ. ನಾವು ಅವಸರದಲ್ಲಿದ್ದೆವು, ಅದನ್ನೆಲ್ಲ ದೃಢಪಡಿಸಿಕೊಳ್ಳುವ ವ್ಯವಧಾನವೂ ನಮ್ಮಲ್ಲಿ ಇರಲಿಲ್ಲ. ಮಾರುಕಟ್ಟೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ನಿಜವಾಗಿಯೂ ವಿಜ್ಞಾನದ ವೇಗದಲ್ಲಿ ಚಲಿಸಬೇಕು ಎಂದು ಸಂಸತ್ತಿನಲ್ಲಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಪ್ರಕಟವಾದ ಒಂದು ಲೇಖನದ ಪ್ರಕಾರ, ಫೈಜರ್ ಬಯೋಎನ್‌ಟೆಕ್ (BNT162b2) ಕೋವಿಡ್ ಲಸಿಕೆಯು ಸೋಂಕನ್ನು ತಡೆಗಟ್ಟಲು ವೈರಸ್ ಹರಡುವಿಕೆಯ ಮೇಲೆ ಸಾಧಾರಣ ಪರಿಣಾಮವಿದೆ ಎಂದು ಹೇಳುತ್ತದೆ. ಆದರೆ, ಲಸಿಕೆ ಹಾಕಿಸಿಕೊಂಡರೆ ಕೋವಿಡ್ ಬೇರೆಯವರಿಗೆ ಹರಡುವುದನ್ನು ತಡೆಯಬಹುದು ಎಂದು ಫೈಜರ್ ಕಂಪನಿ ಅಪಪ್ರಚಾರ ಮಾಡಿದೆ ಎಂಬುದನ್ನು ಸಂಸತ್ ಸದಸ್ಯ ರೂಸ್ ಅವರು ವಿಡಿಯೋ ಮೂಲಕ ಬಯಲು ಮಾಡಿದ್ದರು. ಅಲ್ಲದೆ, ಇದೊಂದು 'ಅಪರಾಧ' ಹಾಗೂ 'ಹಗರಣ' ಮತ್ತು 'ಒಂದು ಅಗ್ಗದ ಸುಳ್ಳು' ಎಂದು ಕರೆದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.
ಇದೀಗ ಯುರೋಪಿಯನ್ ಸಂಸತ್ತಿನಲ್ಲಿ ನಡೆದ ಕೋವಿಡ್ ವಿಚಾರಣೆಯಲ್ಲಿ, ಫೈಜರ್ ಕಂಪನಿಯ ಹಿರಿಯ ಅಧಿಕಾರಿ ಜನೈನ್ ಸ್ಮಾಲ್ ಹೇಳಿಕೆ ನೀಡಿದ್ದು, ಕೋವಿಡ್ ಹರಡದಂತೆ ಲಸಿಕೆ ತಡೆಯುತ್ತದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಮಾರುಕಟ್ಟೆಗೆ ಬಿಡುವ ಮುನ್ನ ನಾವು 'ಸೋಂಕು ಹರಡುವಿಕೆ ತಡೆ ಪರೀಕ್ಷೆ' ನಡೆಸಿರಲಿಲ್ಲ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಇದೀಗ ಇತರೆ ಲಸಿಕೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಾಗಿದೆ.