ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳುತ್ತಿದ್ದಾರೆಯೇ? ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಮಾದಕ ವಸ್ತುಗಳ ಕಳ್ಳಸಾಗಣೆ ತಡೆದರೆ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಬಹುದು ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ
ಎನ್‌ಸಿಬಿ ಮತ್ತು ಇತರ ತನಿಖಾ ಸಂಸ್ಥೆಗಳು ಈಶಾನ್ಯ ರಾಜ್ಯಗಳಿಂದ ವಶಪಡಿಸಿಕೊಂಡಿದ್ದ 40 ಸಾವಿರ ಕೆ.ಜಿ. ಮಾದಕ ವಸ್ತುಗಳನ್ನು ಶನಿವಾರ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನಾಶ ಮಾಡಲಾಯಿತು.
ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಭಾರತೀಯ ಕರಾವಳಿ ರಕ್ಷಣಾ ಪಡೆಯು (ಐಸಿಜಿ) ಆಳ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಮೀನುಗಾರಿಕಾ ದೋಣಿಯಲ್ಲಿ ಸಾಗಿಸುತ್ತಿದ್ದ ಅಂದಾಜು ₹ 350 ಕೋಟಿ ಮೌಲ್ಯದ 50 ಕೆ.ಜಿ. ಹೆರಾಯಿನ್ ವಶಪಡಿಸಿಕೊಂಡು, ಆರು ಮಂದಿಯನ್ನು ಬಂಧಿಸಲಾಗಿದೆ.
ಮಾದಕ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಗೃಹ ಸಚಿವರು ಏನು ಮಾಡಿದ್ದಾರೆ? ಅಥವಾ ಈ ಮೂಲಕ ತನ್ನ ವೈಫಲ್ಯಗಳನ್ನು ಒಪ್ಪಿಕೊಳ್ಳುತ್ತಿದ್ದಾರೆಯೇ? ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಮೂಲಕ ಸುಬ್ರಮಣಿಯನ್ ಸ್ವಾಮಿ ಅವರು ಸದಾ ಸುದ್ದಿಯಲ್ಲಿದ್ದಾರೆ. ಟ್ವೀಟಿಗರಿಗೆ ಹರಿತವಾದ ಪ್ರತಿಕ್ರಿಯೆ ನೀಡುವ ಮೂಲಕ ಒಂದಿಲ್ಲೊಂದು ಚರ್ಚೆ ಹುಟ್ಟುಹಾಕುತ್ತಿದ್ದಾರೆ.
ಅಮಿತ್ ಶಾ ವಿರುದ್ಧ ಮಾತನಾಡಿದ್ದಕ್ಕೆ ಭಕ್ತರು ಸ್ವಾಮಿ ಅವರನ್ನು ಬಾಯ್‌ಕಾಟ್ ಮಾಡುವುದನ್ನು ನಿರೀಕ್ಷಿಸಬಹುದು ಎಂಬ ಕಾಮೆಂಟ್‌ಗೆ ಸುಬ್ರಮಣಿಯನ್ ಸ್ವಾಮಿ ಉತ್ತರಿಸಿದ್ದಾರೆ. ಭಕ್ತರು ಎಂದರೆ ಯಾರ ಮೇಲೆ ಅಥವಾ ಯಾವುದರ ಮೇಲೆ? ಮತ್ತು ಈ ದುಡ್ಡು ಪಡೆದು ಟ್ವೀಟ್ ಮಾಡುತ್ತಿರುವ ಅಂಧ ಮತ್ತು ಗಂಧ ಭಕ್ತರಿಗೆ ಸಾಮಾಜಿಕ ತಾಣಗಳಲ್ಲಿ ಮಾಲಿನ್ಯ ಮಾಡದಂತೆ ಬಾಯ್‌ಕಾಟ್ ಮಾಡಿಕೊಳ್ಳಲು ಹೇಳಬೇಕು ಎಂದಿದ್ದಾರೆ.