ಡೆಹ್ರಾಡೂನ್: ಹೆಲಿಕಾಪ್ಟರ್ ದುರಂತ ಸಂಭವಿಸಿದ ಎರಡು ದಿನಗಳ ಬಳಿಕ ಉತ್ತರಾಖಂಡ್ ನ ಪ್ರಸಿದ್ಧ ಯಾತ್ರಾ ಸ್ಥಳ ಕೇದಾರನಾಥ್ ದೇವಾಲಯಕ್ಕೆ ಹೆಲಿಕಾಪ್ಟರ್ ಸೇವೆ ಪುನರ್ ಆರಂಭವಾಗಿದೆ. ಮಂಗಳವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಪೈಲಟ್ ಹಾಗೂ ಆರು ಮಂದಿ ಭಕ್ತರು ಸಾವನ್ನಪ್ಪಿದ್ದರು.
ಬುಧವಾರ ವಿವಿಧ ವಿಮಾನಯಾನ ಕಂಪನಿಗಳು ಹೆಲಿಕಾಪ್ಟರ್ ಸೇವೆಯನ್ನು ಪುನರ್ ಆರಂಭಿಸಿದ್ದು, 981 ಭಕ್ತರನ್ನು ಕೇದಾರನಾಥ್ ಗೆ ಕರೆದೊಯ್ಯಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅರ್ಯನ್ ವಿಮಾನಯಾನ ಕಂಪನಿ ಮಸ್ತ- ಗುಪ್ತ್ ಕಾಶಿಯಿಂದ ಕೇದಾರನಾಥ್ ಗೆ ಸೇವೆಯನ್ನು ಪುನರ್ ಆರಂಭಿಸಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯದ ತಂಡವೊಂದು ಮಸ್ತ ಹೆಲಿಪ್ಯಾಡ್ ನಲ್ಲಿ ಪರಿಶೀಲನೆ ನಡೆಸಿದ ನಂತರ ಹೆಲಿಕಾಪ್ಟರ್ ಸೇವೆಯನ್ನು ಪುನರ್ ಆರಂಭಿಸಲಾಯಿತು ಎಂದು ಆರ್ಯನ್ ವಿಮಾನಯಾನದ ಅಧಿಕಾರಿ ಗುರುವಾರ ತಿಳಿಸಿದ್ದಾರೆ. ಪ್ರಸ್ತುತ ಕೇದಾರನಾಥ್ ಗೆ ಎಂಟು ಕಂಪನಿಗಳು ಹೆಲಿಕಾಪ್ಟರ್ ಸೇವೆಯನ್ನು ಒದಗಿಸುತ್ತಿವೆ.
ಈ ವರ್ಷದ ಮೇ ತಿಂಗಳಿನಿಂದ ಕೇದಾರನಾಥ ದೇವಾಲಯದ ಬಾಗಿಲು ತೆರೆದ ನಂತರ 1,44,832 ಯಾತ್ರಾರ್ಥಿಗಳು ಹೆಲಿಕಾಪ್ಟರ್ ಮೂಲಕ ದೇವಾಲಯಕ್ಕೆ ಪ್ರಯಾಣಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ದೇವಾಲಯಕ್ಕೆ ತೆರಳಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.