ಆದೋನಿ : 'ಕಾಂಗ್ರೆಸ್‌ನಲ್ಲಿ ಪಕ್ಷದ ಅಧ್ಯಕ್ಷರದ್ದೇ ಪರಮಾಧಿಕಾರ. ಹೀಗಾಗಿ ಪಕ್ಷದಲ್ಲಿ ನನ್ನ ಪಾತ್ರ ಏನು ಹಾಗೂ ನನಗೆ ಯಾವ ಜವಾಬ್ದಾರಿಯನ್ನು ಕೊಡಲಾಗುತ್ತದೆ ಎಂಬುದನ್ನು ನೂತನ ಅಧ್ಯಕ್ಷರೇ ನಿರ್ಧರಿಸುತ್ತಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದರು.
ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಸಂಘಟನೆ, ಭವಿಷ್ಯದ ಯೋಜನೆಗಳ ಕುರಿತು ನೂತನ ಅಧ್ಯಕ್ಷರೇ ನಿರ್ಧಾರ ಕೈಗೊಳ್ಳುವರು ಎಂದರು.
'ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಅಕ್ರಮ ನಡೆದಿದೆ ಎಂಬುದಾಗಿ ತರೂರ್ ಆರೋಪಿದ್ದಾರಲ್ಲ' ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಇಂಥ ಆರೋಪಗಳ ಕುರಿತು ಕ್ರಮ ಕೈಗೊಳ್ಳಲು ಪಕ್ಷದಲ್ಲಿ ವ್ಯವಸ್ಥೆಯೊಂದಿದೆ' ಎಂದರು.
'ಟಿ.ಎನ್.ಶೇಷನ್ ತರಹದ ವ್ಯಕ್ತಿಯೊಬ್ಬರು ನೇತೃತ್ವ ಇರುವ, ಆಂತರಿಕವಾಗಿ ಚುನಾವಣಾ ಆಯೋಗವನ್ನು ಹೊಂದಿರುವ ಏಕೈಕ ಪಕ್ಷ ಕಾಂಗ್ರೆಸ್' ಎಂದೂ ಅವರು ಪ್ರತಿಕ್ರಿಯಿಸಿದರು.