ಕಾಸರಗೋಡು: ಗಮಕ ಕಲೆಯ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಪರೋತ್ಸಾಹದ ಅಗತ್ಯವಿದೆ ಎಂಬುದಾಗಿ ಕ.ಸಾ.ಪ.ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.
ಅವರು ಕರ್ನಾಟಕ ಗಮಕ ಕಲಾಪರಿಷತ್ತಿನ ಕೇರಳ ಗಡಿನಾಡಘಟಕ ವತಿಯಿಂದ ಕಾಸರಗೋಡು ನುಳ್ಳಿಪ್ಪಾಡಿ ಹವ್ಯಕ ಭವನದಲ್ಲಿ ಶನಿವಾರ ಆರಂಭಗೊಂಡ 'ಕಲೋಪಾಸನೆ'ಎಂಬ ವಿಶಿಷ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಮಕ ದೇವರಿಗೆ ಅತಿ ಪ್ರಿಯವಾದ ಕಲೆಯಾಗಿದೆ. ಉಳಿದ ನಿಗಮ, ಮಂಡಳಿಗಳಿಗೆ ಲಭಿಸುವ ಪ್ರೋತ್ಸಾಹ ಗಮಕಕ್ಕೆ ಇಂದು ಲಭ್ಯವಾಗುತ್ತಿಲ್ಲ. ಗಮಕ, ಚುಟುಕು ಸಾಹಿತ್ಯಗಳಿಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಲಭಿಸಿದಾಗ ಈ ಕಲೆಯು ಬೆಳೆಯಲು ಸಾಧ್ಯ. ಈ ಮೂಲಕ ಕನ್ನಡ ಸಂಸ್ಕøತಿ, ಸಾಹಿತ್ಯದ ಪುರೋಗತಿಯೂ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಟಿ.ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಯಕ್ಷಗಾನ-ಸಂಗೀತ-ನೃತ್ಯ ಅಕಾಡಮಿ ರಿಜಿಸ್ಟ್ರಾರ್ ಎಚ್.ಎಸ್ ಶಿವರುದ್ರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಗಮಕ ಮತ್ತು ಯಕ್ಷಗಾನಕ್ಕೆ ನಿಕಟ ಸಂಬಂಧವಿದೆ. ಕಲೆಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಕನ್ನಡ ಸಂಸ್ಕøತಿಯೂ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಅಕಾಡಮಿ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಕಾಸರಗೋಡು ಸಾಂಸ್ಕøತಿಕವಾಗಿ ಸಂಪನ್ನವಾಗಿರುವ ಪ್ರದೇಶವಾಗಿದ್ದು, ಇಲ್ಲಿ ನಡೆಯುವ ಕನ್ನಡಪರ ಕಾರ್ಯಕ್ರಮಗಳಿಂದ ಭಾಷೆ ಮತ್ತಷ್ಟು ಸಂಪನ್ನಗೊಂಡಿರುವುದಾಗಿ ತಿಳಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ, ವಕೀಲ ದಾಮೋದರ ಶೆಟ್ಟಿ, ಕಾಸರಗೋಡು ಕರ್ನಾಟಕ ಸಮಿತಿ ಅಧ್ಯಕ್ಷ ಕೆ. ಮುರಳೀಧರ ಬಳ್ಳಕ್ಕುರಾಯ, ಹಿರಿಯ ಗಮಕಿ ತೆಕ್ಕೇಕೆರೆ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿ.ಬಿ ಕುಳಮರ್ವ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪಿ.ವಿ ಶಿವರಾಮ ಭಟ್ ಕಲ್ಲಕಟ್ಟ ಕಾರ್ಯಕ್ರಮ ನಿರೂಪಿಸಿದರು. ಭೀಮರವಿ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಗಮಕ ಕಲಾಧರೆ ಕು. ಶ್ರದ್ಧಾ ಭಟ್ ನಾಯರ್ಪಳ್ಳ ಅವರಿಂದ 'ಶ್ರೀರಾಮ ನಿರ್ಯಾಣ'ಎಂಬ ಹರಿಕಥಾ ಕಾಲಕ್ಷೇಪ, ಕುಮಾರವ್ಯಾಸ ಭಾರತದಿಂದ ಆಯ್ದ 'ಕರ್ಣ ಭೇದನ'ಎಂಬ ಕಥಾಭಾಗದ ವಾಚನ-ವ್ಯಾಖ್ಯಾನ ನಡೆಯಿತು.
ಇಂದು ಸಮಾರೋಪ:
ಅ. 9ರಂದು ಬೆಳಗ್ಗೆ 9ಕ್ಕೆ ಕರ್ನಾಟಕಯಕ್ಷಗಾನ ಎಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಯಕ್ಷಗಾನಎಕಾಡೆಮಿಯ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಭಾಗವಹಿಸುವರು. ಡಾ. ವೆಂಕಟಗಿರಿ, ಕಾಸರಗೋಡು ಚಿನ್ನಾ, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಮಾರೋಪ ಸಮಾರಂಭದಲ್ಲಿ ಡಾ. ಯು.ಮಹೇಶ್ವರಿ ಅವರು ಸಮಾರೋಪ ಭಾಷಣ ಮಾಡುವರು. ಟಿ.ಶಂಕರನಾರಾಯಣಭಟ್ ಅಧ್ಯಕ್ಷತೆ ವಹಿಸುವರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು,ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಲಿದೆ.
ಗಮಕ ಕಲೆಯ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹಲಭ್ಯವಾಗಬೇಕು: ಧರ್ಮದರ್ಶಿ ಹರಿಕೃಷ್ಣ ಪುನರೂರು
0
ಅಕ್ಟೋಬರ್ 08, 2022