ನವದೆಹಲಿ: 2022ರ ಜಾಗತಿಕ ಹಸಿವು ಸೂಚ್ಯಂಕ ವರದಿಯು ಬೇಜವಾಬ್ದಾರಿ ಮತ್ತು ಕುಚೇಷ್ಟೆತನದ್ದು ಎಂದು ಆರ್‌ಎಸ್‌ಎಸ್‌ಮ ಅಂಗಸಂಸ್ಥೆ 'ಸ್ವದೇಶಿ ಜಾಗರಣ್ ಮಂಚ್ (ಎಸ್‌ಜೆಎಂ)' ಹೀಗಳೆದಿದೆ. ಭಾರತದ ಮಾನಹಾನಿ ಮಾಡಿದ್ದಕ್ಕಾಗಿ ವರದಿಯ ಪ್ರಕಾಶಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಅದು ಒತ್ತಾಯಿಸಿದೆ.
2022ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 121 ದೇಶಗಳ ಪಟ್ಟಿಯಲ್ಲಿ 107 ನೇ ಸ್ಥಾನದಲ್ಲಿದೆ. ದಕ್ಷಿಣ ಏಷ್ಯಾದ ನೆರೆಹೊರೆಯ ರಾಷ್ಟ್ರಗಳಿಗಿಂತಲೂ ಭಾರತವನ್ನು ಹಸಿವು ಹೆಚ್ಚು ಬಾಧಿಸುತ್ತಿರುವುದು ವರದಿಯಿಂದ ಬಹಿರಂಗವಾಗಿದ್ದು, ಮಕ್ಕಳ ಅಪೌಷ್ಟಿಕತೆ ಪ್ರಮಾಣವು ಶೇಕಡಾ 19.3 ರಷ್ಟಿದೆ. ಇದು ವಿಶ್ವದಲ್ಲೇ ಅತ್ಯಧಿಕ ಎನಿಸಿದೆ.
ಐರ್ಲೆಂಡ್ ಮತ್ತು ಜರ್ಮನಿಯ ಸರ್ಕಾರೇತರ ಸಂಸ್ಥೆಗಳಾದ 'ಕನ್ಸರ್ನ್ ವರ್ಲ್ಡ್‌ವೈಡ್' ಮತ್ತು 'ವೆಲ್ಟ್ ಹಂಗರ್ ಹಿಲ್ಫ್' ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿವೆ.
'ಜರ್ಮನಿಯ ಸರ್ಕಾರೇತರ ಸಂಸ್ಥೆ 'ವೆಲ್ಟ್ ಹಂಗರ್ ಹಿಲ್ಫ್', ವಿಶ್ವ ಹಸಿವಿನ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಭಾರತದ ಮಾನ ಹಾನಿ ಮಾಡಲು ವರದಿಯನ್ನು ಅತ್ಯಂತ ಬೇಜವಾಬ್ದಾರಿತನದಿಂದ ಸಿದ್ಧಪಡಿಸಲಾಗಿದೆ' ಎಂದು ಎಸ್‌ಜೆಎಂ ಆರೋಪಿಸಿದೆ.
'ವಾಸ್ತವದಿಂದ ದೂರವಿರುವ ಈ ವರದಿಯು ದೋಷಪೂರಿತವಾಗಿದೆ. ಡೇಟಾ ಮಾತ್ರವಲ್ಲದೆ ವಿಶ್ಲೇಷಣೆ ಮತ್ತು ವಿಧಾನದ ದೃಷ್ಟಿಯಿಂದಲೂ ವರದಿ ಹಾಸ್ಯಾಸ್ಪದವಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ವರದಿಯಲ್ಲಿ ಭಾರತವು 116 ದೇಶಗಳ ಪಟ್ಟಿಯಲ್ಲಿ 101 ನೇ ಸ್ಥಾನದಲ್ಲಿತ್ತು' ಎಂದು ಅದು ಹೇಳಿದೆ.
'ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕವನ್ನು ಭಾರತವು ಬಲವಾಗಿ ವಿರೋಧಿಸಿತ್ತು. ಮೌಲ್ಯಮಾಪನದಲ್ಲಿ ಬಳಸುವ ಡೇಟಾ ಮತ್ತು ವಿಧಾನವನ್ನು ಪ್ರಶ್ನಿಸಿತ್ತು. ದೋಷಗಳನ್ನು ಸರಿಪಡಿಸಲಾಗುವುದು ಎಂದು ವಿಶ್ವ ಆಹಾರ ಸಂಸ್ಥೆ ಹೇಳಿತ್ತು. ಆದರೆ ಮತ್ತೊಮ್ಮೆ ಅದೇ ತಪ್ಪು ಮಾಹಿತಿ ಮತ್ತು ವಿಧಾನವನ್ನು ಬಳಸಿಕೊಂಡು ಈ ವರ್ಷದ ವರದಿಯನ್ನು ಬಿಡುಗಡೆ ಮಾಡಲಾಗಿದೆ' ಎಂದು ಆರ್‌ಎಸ್‌ಎಸ್ ಅಂಗಸಂಸ್ಥೆ ಹೇಳಿದೆ.
2022ರ ಜಾಗತಿಕ ಹಸಿವು ಸೂಚ್ಯಂಕವು ತನ್ನ ಪ್ರಕಾಶಕರ ದುರ್ಬುದ್ಧಿಯ ಉದ್ದೇಶವನ್ನು ಸಾಬೀತು ಮಾಡಿದೆ ಎಂದು ಸಂಘಟನೆ ಆರೋಪಿಸಿದೆ.
'ಸ್ವದೇಶಿ ಜಾಗರಣ ಮಂಚ್ ಈ ವರದಿಯ ವಿರುದ್ಧ ಮತ್ತೊಮ್ಮೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದೆ. ಈ ವರದಿಯನ್ನು ಭಾರತ ತಿರಸ್ಕರಿಸಬೇಕು. ಭಾರತದ ಆಹಾರ ಭದ್ರತೆಯ ಬಗ್ಗೆ ಸುಳ್ಳು ಸುದ್ದಿಯನ್ನು ಹರಡುವ ಮೂಲಕ ಭಾರತವನ್ನು ದೂಷಿಸುವ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ' ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜಾಗತಿಕ ಹಸಿವು ಸೂಚ್ಯಂಕದ ವರದಿಯನ್ನು ಭಾರತ ಸರ್ಕಾರ ಶನಿವಾರ ತಿರಸ್ಕರಿಸಿದೆ.