ಮಂಜೇಶ್ವರ: ರಾಜ್ಯಾದ್ಯಂತ ನಡೆಯುತ್ತಿರುವ ಮಾದಕವಸ್ತು ಬಳಕೆಯ ಬಗೆಗಿನ ಜನಜಾಗೃತಿ ಕಾರ್ಯಕ್ರಮದ ಭಾಗವಾಗಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ ಜಿಲ್ಲಾ ಮಾಹಿತಿ ಕಛೇರಿ ಹಾಗೂ ಎನ್‍ಎಸ್‍ಎಸ್ ಘಟಕದ ವತಿಯಿಂದ ನಡೆಯಿತು.
ಶಾಸಕ ಎ.ಕೆ.ಎಂ.ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜ ಅತ್ಯಂತ ಜಾಗೃತರಾಗಿ ಮಾದಕ ವ್ಯಸನದ ವಿರುದ್ಧ ಕಣ್ಣು, ಕಿವಿ ತೆರೆದುಕೊಳ್ಳಬೇಕಾದ ಸಮಯ ಬಂದಿದೆ. ಹುಡುಗಿಯರು ಸೇರಿದಂತೆ ಮಾದಕ ವ್ಯಸನಿಗಳ ಸುದ್ದಿ ಆಘಾತಕಾರಿಯಾಗಿದೆ. ವ್ಯಸನದ ವಿರುದ್ಧದ ಹೋರಾಟ ಸಮಾಜದ ಪ್ರತಿಯೊಬ್ಬರಿಂದಲೂ ಆರಂಭವಾಗಬೇಕು. ಗಾಂಧಿ ಜಯಂತಿ ಸಪ್ತಾಹ ಆಚರಣೆಯ ಹೊರತಾಗಿ ಮಾದಕ ವ್ಯಸನದ ವಿರುದ್ಧ ಸದಾ ಜಾಗೃತರಾಗಿ ಜಾಗೃತಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು.
ಅಬಕಾರಿ ಪ್ರಿವೆಂಟಿವ್ ಅಧಿಕಾರಿ ಎನ್.ಜಿ.ರಘುನಾಥ್ ಮಾದಕ ವಸ್ತು ವಿರೋಧಿ ಜಾಗೃತಿ ತರಗತಿ ನಡೆಸಿದರು. ಕಾಲೇಜು ಪ್ರಭಾರ ಪ್ರಾಚಾರ್ಯ ಪಿ.ಶಿವಶಂಕರ್ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಮುಕ್ತ ಸಂದೇಶ ನೀಡಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಅಬ್ದುಲ್ ಹಮೀದ್ ಹಾಗೂ ಕಾಲೇಜು ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಜೀವೇಶ್ ವಿಶ್ವಂಭರನ್ ಮಾತನಾಡಿದರು. ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿ, ಸಹಾಯಕ ಸಂಪಾದಕ ಪ್ರದೀಪ್ ನಾರಾಯಣನ್ ವಂದಿಸಿದರು. ಜಾಗೃತಿ ತರಗತಿಯ ನಂತರ ಮಾದಕ ವಸ್ತು ವಿರೋಧಿ ಸಂದೇಶದೊಂದಿಗೆ ಜಾದೂಗಾರ ಬಾಲಚಂದ್ರ ಕೋಟೋಡಿ ಅವರ ಜಾದೂ ಪ್ರದರ್ಶನ ನಡೆಯಿತು.