ನವದೆಹಲಿ :ಧರ್ಮದ ಕುರಿತಾದ ಪ್ರಶ್ನೆಯು ತನ್ನ ಬಾಳಸಂಗಾತಿಯನ್ನು ಆರಿಸುವ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ಯಾವುದೇ ಪರಿಣಾಮ ಬೀರದು, ಏಕೆಂದರೆ ಈ ಸ್ವಾತಂತ್ರ್ಯ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಅಡಿಯಲ್ಲಿ ಖಾತ್ರಿಪಡಿಸಲಾಗಿದೆ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವ್ಯಕ್ತಿಯೊಬ್ಬನನ್ನು ವಿವಾಹವಾಗಿದ್ದ ಮಹಿಳೆಯ ಕುಟುಂಬದ ಸದಸ್ಯರು ಸಲ್ಲಿಸಿದ್ದ ಮೂರು ಜಾಮೀನು ಅರ್ಜಿಗಳಿಗೆ ಸಂಬಂಧಿಸಿದಂತೆ ಜಸ್ಟಿಸ್ ಅನೂಪ್ ಕುಮಾರ್ ಮೆಂಡಿರಟ್ಟ ತಮ್ಮ ಆದೇಶದಲ್ಲಿ ಮೇಲಿನಂತೆ ಹೇಳಿದ್ದಾರೆ. ಯುವತಿ ಮದುವೆಯಾದ ಯುವಕನ ಮೇಲೆ ಬರ್ಬರ ಹಲ್ಲೆ ನಡೆಸಲು ಪ್ರಚೋದಿಸಿದ್ದಾರೆಂಬ ಆರೋಪವನ್ನು ಯುವತಿಯ ಸಹೋದರಿ, ತಾಯಿ ಮತ್ತು ಅಜ್ಜಿ ಎದುರಿಸುತ್ತಿದ್ದು, ಜಾಮೀನು ಅರ್ಜಿಯನ್ನು ಸಲ್ಲಿಸಿದವರಾಗಿದ್ದಾರೆ.
ಕಳೆದ ಡಿಸೆಂಬರ್ 21 ರಂದು ಮದುವೆ ನಡೆದಿತ್ತು. ಇದು ತಿಳಿದು ಬರುತ್ತಲೇ ಯುವತಿಯ ಕುಟುಂಬ ಯುವಕನ್ನು ಕೊಲ್ಲುವ ಬೆದರಿಕೆಯೊಡ್ಡಿತ್ತು.
ಡಿಸೆಂಬರ್ 22 ರಂದು ಯುವಕ ದಿಲ್ಲಿಯ ರಜೌರಿ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿ ರಕ್ಷಣೆ ಕೋರಿದ್ದ ಆದರೆ ಠಾಣೆಯಿಂದ ದಂಪತಿ ಹೊರಬಂದು ಮನೆಯತ್ತ ಸಾಗುತ್ತಿದ್ದಂತೆ ಯುವತಿಯ ಕುಟುಂಬ ಸದಸ್ಯರು ಅವರಿಬ್ಬರನ್ನು ಅಪಹರಿಸಿದ್ದರು. ಯುವಕನ ಮರ್ಮಾಂಗ ಕತ್ತರಿಸಿ ಹಾಕುವಂತೆ ಇತರ ಕುಟುಂಬ ಸದಸ್ಯರಿಗೆ ಯುವತಿಯ ತಾಯಿ, ಅಜ್ಜಿ ಮತ್ತು ಸೋದರಿ ಪ್ರೇರೇಪಿಸಿದ್ದರೆನ್ನಲಾಗಿದ್ದು ಅಂತೆಯೇ ಆತನ ಮರ್ಮಾಂಗಕ್ಕೆ ಕೊಡಲಿಯಿಂದ ಹಲ್ಲೆಗೈದು ಆತನನ್ನು ನಾಲೆಗೆ ಎಸೆಯಲಾಗಿತ್ತು. ನಂತರ ಆತನನ್ನು ಆತನ ಸೋದರ ರಕ್ಷಿಸಿದ್ದ.
ಯುವತಿಯ ತಾಯಿ ಹಾಗೂ ಅಜ್ಜಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ ಸೋದರಿಗೆ ಮಾತ್ರ ಜಾಮೀನು ನೀಡಿದ್ದು ಆಕೆ ಈ ಕೃತ್ಯದಲ್ಲಿ ಶಾಮೀಲಾಗಿಲ್ಲ ಎಂದು ತಿಳಿದು ಬಂದಿದೆ ಎಂದು ಹೇಳಿದೆ.
ದಂಪತಿಗೆ ಪೊಲೀಸರು ರಕ್ಷಣೆಯೊದಗಿಸಲು ವಿಫಲರಾಗಿದ್ದು ದುರಾದೃಷ್ಟಕರ ಎಂದೂ ನ್ಯಾಯಾಧೀಶರು ಹೇಳಿದರು.
ತಮ್ಮ ಸ್ವಂತ ಇಚ್ಛೆಯಿಂದ ಮದುವೆಯಾಗುವವರು ತಮ್ಮವರಿಂದ ಅಪಾಯ ಎದುರಿಸುತ್ತಿದ್ದಾರೆಂದು ಮನವರಿಕೆಯಾದಲ್ಲಿ ತ್ವರಿತವಾಗಿ ಸ್ಪಂದಿಸಿ ರಕ್ಷಣೆಗೆ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.