ಬದಿಯಡ್ಕ: ಕೇರಳ ಹಿರಿಯ ನಾಗರಿಕ ವೇದಿಕೆ ಬದಿಯಡ್ಕ ಇದರ ಆಶ್ರಯದಲ್ಲಿ ಬದಿಯಡ್ಕ ಘಟಕದ ಸ್ಥಾಪಕ ದಿ. ಗೋಪಾಲಕೃಷ್ಣ ಭಟ್ ಚೇರ್ಕೂಡ್ಲು ಅವರ ಸಂಸ್ಮರಣಾ ಕಾರ್ಯಕ್ರಮವು ಗುರುವಾರ ಬದಿಯಡ್ಕ ಗ್ರಾಮಪಂಚಾಯಿತಿ ವಯೋಜನರ ಹಗಲುಮನೆಯಲ್ಲಿ ಜರಗಿತು.
ಘಟಕದ ಅಧ್ಯಕ್ಷ ಪೆರ್ಮುಖ ಈಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಬ್ಯಾಂಕ್ ಪ್ರಬಂಧಕ ಕೃಷ್ಣಮೂರ್ತಿ ಎಡಪ್ಪಾಡಿ ದೀಪಬೆಳಗಿಸಿ ಉದ್ಘಾಟಿಸಿ ಪುμÁ್ಪರ್ಚನೆಗೈದು ಮಾತನಾಡಿದರು. ಉತ್ತಮ ಸಂಘಟಕರಾಗಿ ಸದಾ ಚಟುವಟಿಕೆಯಿಂದ ಇರುತ್ತಿದ್ದ ಜಿಕೆ ಭಟ್ ಚೇರ್ಕೂಡ್ಲು ಓರ್ವ ಆದರ್ಶ ವ್ಯಕ್ತಿಯಾಗಿದ್ದರು. ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಛಾಪನ್ನು ಮೂಡಿಸುತ್ತಿದ್ದ ಅವರು ವಿವಿಧ ಸಂಘಟನೆಗಳನ್ನು ಹುಟ್ಟುಹಾಕಿ ಬೆಳೆಸಿದ್ದು, ಅದು ಇಂದು ಉತ್ತಮವಾಗಿ ಕಾರ್ಯಾಚರಿಸುತ್ತಿದೆ ಎಂಬುದು ಗಮನಾರ್ಹ ಎಂದರು.
ಗ್ರಾಮಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಹಿರಿಯರಾದ ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್, ಉದ್ಯಮಿ ಎಸ್.ಎನ್.ಮಯ್ಯ ಬದಿಯಡ್ಕ, ನಿವೃತ್ತ ಪ್ರಾಂಶುಪಾಲರುಗಳಾದ ಬೇಸೀ ಗೋಪಾಲಕೃಷ್ಣ ಭಟ್, ಮೈರ್ಕಳ ನಾರಾಯಣ ಭಟ್, ಸಮಾಜಸೇವಕರುಗಳಾದ ಬೇಂಗ್ರೋಡಿ ಜನಾರ್ಧನ ಭಟ್, ಚಂದ್ರಹಾಸ ರೈ ಪೆರಡಾಲಗುತ್ತು, ಗಣೇಶ್ ಭಟ್ ಚೇರ್ಕೂಡ್ಲು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯದರ್ಶಿ ಸಂಪತ್ತಿಲ್ಲ ಶಂಕರನಾರಾಯಣ ಭಟ್ ವಂದಿಸಿದರು.