ಬದಿಯಡ್ಕ: ಶತಮಾನಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಪ್ರಧಾನ ಸೇವೆ ಸಲ್ಲಿಸುತ್ತಿರುವ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳಲ್ಲಿ ಈ ಬಾರಿಯ ಕುಂಬಳೆ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿರುವುದು ಸಂತೋಷದ ವಿಷಯ. ಕಳೆದ ಎರಡು ವರ್ಷಗಳಲ್ಲಿ ತೊಂದರೆಗೊಳಗಾದ ವಿದ್ಯಾರ್ಥಿಗಳ ಚಟುವಟಿಕೆಗಳು ಈ ಮೂಲಕ ಗರಿಗೆದರುತ್ತಿರುವುದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾಂದಿಹಾಡಲಿದೆ. ಖಂಡಿಗೆ ಶಾಮ ಭಟ್ಟರಂತಹ ಮಹಾನುಭಾವರು ನಡೆದಾಡಿದ ನೆಲದಲ್ಲಿ ಈ ಪಠ್ಯೇತರ ಚಟುವಟಿಕೆಗಳ ಹಬ್ಬಕ್ಕೆ ಚಾಲನೆ ದೊರೆತಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಬೆಳಗ್ಗೆ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ ‘ಶಾಸ್ತ್ರೋತ್ಸವಂ’(ವಿಜ್ಞಾನ ಮೇಳ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಬಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಎಂ.ಶೈಲಜಾ ಭಟ್, ಬದಿಯಡ್ಕ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್ ಎಂ, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯೆ ಜಯಂತಿ, ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯೆ ಜಯಶ್ರೀ ಪಿ, ಕುಂಬಳೆ ಬಿಪಿಸಿ ಜಯರಾಮ್ ಜೆ, ಬದಿಯಡ್ಕ ಗ್ರಾಮ ಪಂಚಾಯತಿ ಪಿಇಸಿ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ, ಕುಂಬಳೆ ಉಪಜಿಲ್ಲಾ ಮುಖ್ಯೋಪಾಧ್ಯಾಯರ ಸಂಘಟನೆಯ ಸಂಚಾಲಕ ವಿಷ್ಣುಪಾಲ ಬಿ, ಕುಂಬಳೆ ಉಪಜಿಲ್ಲಾ ಏಕ್ಟಿವಿಟಿ ಸಮಿತಿಯ ಸಂಚಾಲಕ ಸುರೇಂದ್ರನ್ ಎಂ.ವಿ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಮಾಲತಿ.ವೈ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಎಸ್.ನಾರಾಯಣ ಮತ್ತು ಮೋಹನ್ ಡಿ.ಎನ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯ ಈಶ್ವರ ನಾಯಕ್, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಪ್ರಭಾರ ಪ್ರಾಂಶುಪಾಲ ಎಂ.ಸುಬ್ರಹ್ಮಣ್ಯನ್ ಉಪಸ್ಥಿತರಿದ್ದರು.
ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆಯವರು ಧ್ವಜಾರೋಹಣಗೈದರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಸ್ವಾಗತಿಸಿ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ಶಿವಪ್ರಕಾಶ್ ಎಂ.ಕೆ ವಂದಿಸಿದರು. ಶಾಲಾ ಶಿಕ್ಷಕ ವಿಶ್ವನಾಥ ಭಟ್ ಕಾರ್ಯಕ್ರಮ ನಿರೂಪಿಸಿದರು.
ಅಕ್ಟೋಬರ್ 21 ರಂದು ಸಮಾಜ ವಿಜ್ಞಾನ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸ್ಪರ್ಧೆಗಳು ನಡೆಯಿತು. ಇಂದು ವಿಜ್ಞಾನ ಮತ್ತು ವೃತ್ತಿಪರಿಚಯಕ್ಕೆ ಸಂಬಂಧಿಸಿದ ಸ್ಪರ್ಧೆಗಳು ಜರಗಲಿವೆ. ಕಾರ್ಯಕ್ರಮದಲ್ಲಿ ಕುಂಬಳೆ ಉಪಜಿಲ್ಲೆಯ ವಿವಿಧ ಸರ್ಕಾರಿ, ಅನುದಾನಿತ ಮತ್ತು ಅನನುದಾನಿತ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಸ್ಪರ್ಧೆಗಳು ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಹೈಯರ್ ಸೆಕೆಂಡರಿ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಜರಗುತ್ತಿವೆ. ಕುಂಬಳೆ ಉಪಜಿಲ್ಲೆಯ 117 ಶಾಲೆಗಳಿಂದ 3146 ಮಂದಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.