ಅಹಮದಾಬಾದ್: ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತವು ಸುಧಾರಣೆ ಕಂಡಿದೆ. 81ನೇ ಸ್ಥಾನದಿಂದ 40ನೇ ಸ್ಥಾನಕ್ಕೆ ಏರಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಗುಜರಾತ್ ವಿಶ್ವವಿದ್ಯಾಲಯವು ಉದ್ಯಮದಲ್ಲಿ ಮಹಿಳೆಯರನ್ನು ಉತ್ತಜಿಸುವ ನಿಟ್ಟಿನಲ್ಲಿ ಆರಂಭಿಸಿರುವ 'ಹರ್‌ಸ್ಟಾರ್ಟ್' ಯೋಜನೆಗೆ ದ್ರೌಪದಿ ಮುರ್ಮು ಅವರು ಚಾಲನೆ ನೀಡಿ ಮಾತನಾಡಿದರು.
'ಈ ವಿಶ್ವವಿದ್ಯಾಲಯವು ಸುಮಾರು 450 ಸ್ಟಾರ್ಟ್‌ಅಪ್ ಗಳನ್ನು ಆರಂಭಿಸಿದೆ. ಈ ಪೈಕಿ 125 ಸ್ಟಾರ್ಟ್‌ಅಪ್‌ಗಳಿಗೆ ಮಹಿಳೆಯರು ಮುಖ್ಯಸ್ಥರಾಗಿದ್ದಾರೆ. 'ಹರ್‌ಸ್ಟಾರ್ಟ್' ಎಂಬ ಯೋಜನೆಗೆ ಚಾಲನೆ ನೀಡಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಮುರ್ಮು ತಿಳಿಸಿದ್ದಾರೆ.
'ಇತ್ತೀಚೆಗೆ ಬಿಡುಗಡೆಯಾಗಿರುವ ಜಾಗತಿಕ ನಾವೀನ್ಯತೆ ಸೂಚ್ಯಂಕ 2022ರಲ್ಲಿ ಭಾರತವು 40ನೇ ಸ್ಥಾನವನ್ನು ಹೊಂದಿದೆ. 2015ರಲ್ಲಿ ಭಾರತವು 81ನೇ ಸ್ಥಾನದಲ್ಲಿತ್ತು. ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ಸಿಗುತ್ತಿರುವುದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಈ ಅಮೃತಕಾಲದಲ್ಲಿ (ಅಮೃತ ಮಹೋತ್ಸವ - 75ನೇ ಸ್ವಾತಂತ್ರೋತ್ಸವದಿಂದ 100ನೇ ಸ್ವಾತಂತ್ರೋತ್ಸವದ ವೇಳೆಗೆ) ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂಬ ಭರವಸೆ ಹೊಂದಿದ್ದೇನೆ ಎಂದು ಹೇಳಿದರು.