ಜೈಪುರ: ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನುಪ್‌ಗಢ ಸೆಕ್ಟರ್‌ನಲ್ಲಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಯತ್ನಿಸುತ್ತಿದ್ದ ಪಾಕಿಸ್ತಾನದ ನಾಗರಿಕನನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಗಡಿ ಭದ್ರತಾ ಪಡೆ ಸಿಬ್ಬಂದಿ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಪಾಕಿಸ್ತಾನಿ ನಾಗರಿಕನೊಬ್ಬ ಭಾರತ ಪ್ರವೇಶಿಸಲು ಯತ್ನಿಸುತ್ತಿರುವುದು ಕಂಡು ಬಂದಿದೆ.
ಗಡಿ ಪ್ರವೇಶಿಸದಂತೆ ಯೋಧರು ಎಚ್ಚರಿಸಿದರೂ ನಿಲ್ಲಿಸದೆ ಇದ್ದಾಗ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಶ್ರೀಗಂಗಾನಗರ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಶರ್ಮಾ ತಿಳಿಸಿದ್ದಾರೆ. ಈ ಸಂಬಂಧ ಅನುಪ್ ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಶವಾಗಾರದಲ್ಲಿ ಇರಿಸಲಾಗಿದೆ.
ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಆತನ ಬಳಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.