ಗ್ಯಾಂಗ್ಟಕ್: ಭಾನುವಾರ ನಸುಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಿಕ್ಕಿಂನ ಹಲವೆಡೆ ಭೂಕುಸಿತ ಸಂಭವಿಸಿದ್ದು, ಗ್ಯಾಂಗ್ಟಕ್ ಮತ್ತು ಮತ್ತು ಪಶ್ಚಿಮ ಬಂಗಾಳ ನಡುವಿನ ರಸ್ತೆ ಸಂಪರ್ಕ ಕಡಿತವಾಗಿದೆ.
ಪೂರ್ವ ಸಿಕ್ಕಿಂನ ಸಿಂಗ್ತಮ್ ಮತ್ತು ರಂಗ್ಪೊ ನಡುವೆ ರಾಷ್ಟ್ರೀಯ ಹೆದ್ದಾರಿ-10ರಲ್ಲಿ ಎರಡು ಕಡೆಗಳಲ್ಲಿ ಬೃಹತ್ ಗಾತ್ರದ ಬಂಡೆಗಳು ರಸ್ತೆಗೆ ಬಿದ್ದಿವೆ.
ಇದರಿಂದ ಸಿಂಗ್ತಮ್‌ನಿಂದ ಗ್ಯಾಂಗ್ಟಕ್‌ಗೆ ತೆರಳುವ ಮಾರ್ಗವೂ ಬಂದ್ ಆಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಸ್ತೆಗಳ ಮೇಲೆ ಬಿದ್ದಿರುವ ಬಂಡೆ, ಮಣ್ಣನ್ನು ತೆರವುಗೊಳಿಸಿ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲು ಇಡೀ ದಿನ ಬೇಕಾಗುತ್ತದೆ. ಪಶ್ಚಿಮ ಬಂಗಾಳದ ಸಿಲಿಗುರಿಗೆ ಪ್ರಯಾಣಿಸುತ್ತಿರುವವರಿಗೆ ಸೆಂಟ್ರಲ್ ಪೆಂಡಮ್ ಅಥವಾ ಪಕ್ಯಾಂಗ್ ಮಾರ್ಗಗಳಲ್ಲಿ ತೆರಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.