ನವದೆಹಲಿ: ಆಯುರ್ವೇದ(Ayurveda) ಕುರಿತು ವಿಕಿಪೀಡಿಯಾ ಪ್ರಕಟಿಸಿರುವ ಲೇಖನವು ಮಾನಹಾನಿಕರವಾಗಿದೆ ಎಂದು ದೂರಿ ಭಾರತೀಯ ಆಯುರ್ವೇದ ಔಷಧಿಗಳ ತಯಾರಕರ ಸಂಘವು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯ(Supreme Court)ವು ಶುಕ್ರವಾರ ನಿರಾಕರಿಸಿದೆ.
ವಿಕಿಪೀಡಿಯಾ ಲೇಖನವು ಆಯುರ್ವೇದವನ್ನು ಢೋಂಗಿ ವಿಜ್ಞಾನ(Fake science)ವೆಂದು ಬಣ್ಣಿಸಿದೆ ಎಂದು ತಿಳಿಸಿರುವ ಪಿಐಎಲ್,ಈ ಲೇಖನ ಅನಗತ್ಯವಾಗಿತ್ತು ಮತ್ತು ಆಯುರ್ವೇದದ ವರ್ಚಸ್ಸಿಗೆ ಕಳಂಕ ತರುವ ಏಕೈಕ ಉದ್ದೇಶದಿಂದ ಅದನ್ನು ಬರೆಯಲಾಗಿದೆ ಎಂದು ಆರೋಪಿಸಿದೆ.
ಲೇಖನವು ಸಂಪೂರ್ಣ ಅಸಂಬದ್ಧವಾಗಿದೆ,ಕಳಪೆ ಸಂಶೋಧನೆಯಿಂದ ಕೂಡಿದೆ ಮತ್ತು ಪೂರ್ವಾಗ್ರಹ ಪೀಡಿತವಾಗಿದೆ ಹಾಗೂ ಗೂಗಲ್ನಲ್ಲಿ ಆಯುರ್ವೇದಕ್ಕಾಗಿ ಹುಡುಕಾಡಿದಾಗ ಮೊದಲ ಲೇಖನವಾಗಿ ಕಾಣಿಸಿಕೊಳ್ಳುತ್ತದೆ ಎನ್ನುವುದು ಕಳವಳದ ವಿಷಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಆದಾಗ್ಯೂ,ವಿಕಿಪೀಡಿಯಾದಲ್ಲಿನ ಲೇಖನಗಳನ್ನು ಎಡಿಟ್ ಮಾಡಲು ಅವಕಾಶವಿದೆ ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಪಿ.ಎಸ್.ನರಸಿಂಹ ಅವರ ಪೀಠವು ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಪಿಐಎಲ್ ಸಲ್ಲಿಕೆಯಾದ ಬಳಿಕ ಲೇಖನದ ಕೆಲವು ಭಾಗಗಳನ್ನು ಎಡಿಟ್ ಮಾಡಲಾಗಿದೆ,ಆದರೂ ವರದಿಯ ಸಮಯದಲ್ಲಿ ಅದು ಈಗಲೂ ಆಯುರ್ವೇದವನ್ನು ಢೋಂಗಿ ವಿಜ್ಞಾನವೆಂದು ಉಲ್ಲೇಖಿಸುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
'ವಿಧಿ 32ರಡಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಯಾವುದೇ ಕಾರಣ ನಮಗೆ ಕಂಡು ಬರುತ್ತಿಲ್ಲ. ಆದರೆ ಕಕ್ಷಿದಾರರು ಕಾನೂನಿನಲ್ಲಿ ಲಭ್ಯವಿರುವ ಇತರ ಪರಿಹಾರಗಳನ್ನು ಬಳಸಿಕೊಳ್ಳಬಹುದು 'ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿತು.