ನವದೆಹಲಿ : ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ತಿರುವನಂತಪುರ ಸಂಸದ ಶಶಿ ತರೂರ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಯ ಚುನಾವಣಾ ಕಣದಲ್ಲಿ ಅಂತಿಮವಾಗಿ ಉಳಿದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಪ್ರಕಟಿಸಿದೆ.
ನಾಮಪತ್ರ ಹಿಂದಕ್ಕೆ ಪಡೆಯಲು ಶನಿವಾರ ಕೊನೆಯ ದಿನವಾಗಿತ್ತು.
ನೆಹರೂ-ಗಾಂಧಿ ಕುಟುಂಬದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಪಕ್ಷದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. 22 ವರ್ಷಗಳ ಬಳಿಕ ಈ ಕುಟುಂಬದ ಹೊರಗಿನವರೊಬ್ಬರು ಅಧ್ಯಕ್ಷ ಸ್ಥಾನಕ್ಕೆ ಏರಲು ವೇದಿಕೆ ಸಿದ್ಧವಾಗಿದೆ.
ಪ್ರತಿ
ರಾಜ್ಯದ ರಾಜಧಾನಿಯಲ್ಲಿ ಇದೇ 17ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಮತದಾನ
ನಡೆಯಲಿದೆ. ಮತದಾನದ ಬಳಿಕ ಮತಪೆಟ್ಟಿಗೆಗಳನ್ನು ದೆಹಲಿಗೆ ತರಲಾಗುವುದು. ಇದೇ 19ರಂದು
ಮತಎಣಿಕೆ ನಡೆಸಿ, ಅಂದೇ ಫಲಿತಾಂಶ ಪ್ರಕಟಿಸಲಾಗುವುದು ಎಂದು
ಕಾಂಗ್ರೆಸ್‌ನ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ ಮಿಸ್ತ್ರಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ 'ಭಾರತ್ ಜೋಡೊ' ಯಾತ್ರೆ ನಡೆಯುತ್ತಿರುವ ಸ್ಥಳಕ್ಕೆ ಮತಪೆಟ್ಟಿಗೆ ಕಳುಹಿಸಲಾಗುವುದು. ಅಲ್ಲಿಯೇ ಮತಗಟ್ಟೆಯೊಂದನ್ನು ಸ್ಥಾಪಿಸಲಾಗುವುದು. ಚುನಾವಣೆಗೆ ಸಂಬಂಧಿಸಿ ಮಾರ್ಗಸೂಚಿ ಯನ್ನು ಪ್ರಕಟಿಸಲಾಗಿದೆ. ಅದನ್ನು ಎಲ್ಲರೂ ಅನುಸರಿಸಬೇಕು ಎಂದು ಅವರು ಹೇಳಿದ್ದಾರೆ.
ಇಬ್ಬರು ಅಭ್ಯರ್ಥಿಗಳಿಗೂ ಸಮಾನ ಅವಕಾಶ ಇದೆ. ಚುನಾವಣೆಯು ಏಕಮುಖವಾಗಿ ನಡೆಯಲಿದೆ ಎಂಬ ಕಳವಳ ಇಲ್ಲ. ಚುನಾವಣಾ ಪ್ರಕ್ರಿಯೆ ಕುರಿತು ಒಂದು ದೂರು ದಾಖಲಾಗಿದೆ ಎಂದು ಅವರು ತಿಳಿಸಿದರು. ಆದರೆ, ಅದು ಯಾರು ಕೊಟ್ಟ ದೂರು ಎಂಬುದನ್ನು ಬಹಿರಂಗಪಡಿಸಲಿಲ್ಲ. ಪಕ್ಷದ ಕೆಲವು ಪದಾಧಿಕಾರಿಗಳು ಖರ್ಗೆ ಅವರ ಪರವಾಗಿ ಬಹಿರಂಗವಾಗಿಯೇ ಪ್ರಚಾರ ನಡೆಸಿದ್ದರ ಬಗ್ಗೆ ತರೂರ್ ಅವರು ದೂರು ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಕೇಂದ್ರ ಕಚೇರಿಯು ಸೇರಿದಂತೆ ದೇಶದಾದ್ಯಂತ 67 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಮಿಸ್ತ್ರಿ ತಿಳಿಸಿದ್ದಾರೆ.