ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಾರಾಗೃಹಗಳ ಮಹಾನಿರ್ದೇಶಕ ಹೇಮಂತ್ ಕೆ ಲೋಹಿಯಾ ಅವರ ಹತ್ಯೆಯ ಆರೋಪದ ಮೇಲೆ ಅವರ ಮನೆಕೆಲಸ ಮಾಡುತ್ತಿದ್ದ 23 ವರ್ಷದ ಯುವಕನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಕೆಲಸ ಮಾಡಿಕೊಂಡಿದ್ದ ಆರೋಪಿ ಯಾಸಿರ್ ಲೋಹರ್‌ನ ಬಂಧನದ ನಂತರ, ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆತನನ್ನು ಕಂಚಕ್ ಪ್ರದೇಶದ ಮೈದಾನದಲ್ಲಿ ಬಂಧಿಸಲಾಗಿದೆ. ಆತ ರಾಂಬನ್ ಜಿಲ್ಲೆಯ ಹಲ್ಲಾ-ಧಂದ್ರತ್ ಗ್ರಾಮದ ನಿವಾಸಿ.
ಈ ವರ್ಷದ ಆಗಸ್ಟ್ 3 ರಂದು ಜಮ್ಮು ಕಾರಾಗೃಹ ಇಲಾಖೆ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದ ಲೋಹಿಯಾ ನಿನ್ನೆ ಸಂಜೆ ಜಮ್ಮುವಿನ ಉಧೇವಾಲಾ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು 1992ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು.
ಹತ್ಯೆಯ ನಂತರ, ವಿಧಿ ವಿಜ್ಞಾನ ಪ್ರಯೋಗಾಲಯದ ತಂಡಗಳು ಮಾದರಿಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಅಪರಾಧ ಸ್ಥಳಕ್ಕೆ ತಲುಪಿದ್ದು, ಉನ್ನತ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಸದ್ಯ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಘಟನೆಯ ಸ್ಥಳದಿಂದ ಸಂಗ್ರಹಿಸಲಾದ ಕೆಲವು ಸಿಸಿಟಿವಿ ದೃಶ್ಯಾವಳಿಗಳು ಈ ಅಪರಾಧದ ನಂತರ ಶಂಕಿತ ಆರೋಪಿಗಳು ಓಡಿಹೋಗುವುದನ್ನು ತೋರಿಸುತ್ತವೆ ಎಂದು ಜಮ್ಮುವಿನ ಎಡಿಜಿಪಿ ಮುಖೇಶ್ ಸಿಂಗ್ ಹೇಳಿದ್ದಾರೆ. ಪೊಲೀಸರ ಪ್ರಕಾರ, ಯಾಸಿರ್ ಸುಮಾರು 6 ತಿಂಗಳಿನಿಂದ ಲೋಹಿಯಾ ಮನೆಯಲ್ಲಿ ಕೆಲಸ ಮಾಡುತ್ತಿದ್ದ.ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಆಫ್-ಶೂಟ್ ಎಂದು ಹೇಳಲಾದ ಉಗ್ರಗಾಮಿ ಸಂಘಟನೆ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫೋರ್ಸ್ (ಪಿಎಎಫ್ಎಫ್) ಹತ್ಯೆಯ ಹೊಣೆ ಹೊತ್ತುಕೊಂಡಿದೆ.
'ನಮ್ಮ ವಿಶೇಷ ಪಡೆ ಕಾರ್ಯಾಚರಣೆ ನಡೆಸಿದೆ. ಈ ಹಿಂದುತ್ವದ ಆಡಳಿತ ಮತ್ತು ಅದರ
ಸಹಯೋಗಿಗಳನ್ನು ಎಚ್ಚರಿಸಲು ನಾವು ಯಾವುದೇ ಸಮಯದಲ್ಲಿ ಮತ್ತು ಎಲ್ಲಿ ಬೇಕಾದರೂ ನಿಖರವಾಗಿ
ಯಾರನ್ನಾದರೂ ಹೊಡೆಯಬಹುದು ಎಂದು ಎಚ್ಚರಿಸಲು ಇದು ಅಂತಹ ಉನ್ನತ ಕಾರ್ಯಾಚರಣೆಗಳ
ಪ್ರಾರಂಭವಾಗಿದೆ. ಇಷ್ಟೊಂದು ಭದ್ರತೆಯ ನಡುವೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ
ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇದೊಂದು 'ಸಣ್ಣ' ಉಡುಗೊರೆ ಎಂದು
ಹೇಳಿಕೆಯಲ್ಲಿ ಹೇಳಿದೆ.
ಮೂರು ದಿನಗಳ ಜಮ್ಮು ಮತ್ತು ಕಾಶ್ಮೀರ ಭೇಟಿಗಾಗಿ ಗೃಹ ಸಚಿವ ಅಮಿತ್ ಶಾ ಜಮ್ಮುವಿಗೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಲೋಹಿಯಾ ಹತ್ಯೆ ನಡೆದಿದೆ.