ಟೊರೊಂಟೊ: ಕೆನಡಾದ ಬ್ರಾಂಪ್ಟನ್‌ನಲ್ಲಿ ಇತ್ತೀಚೆಗೆ ಅನಾವರಣಗೊಂಡ ಶ್ರೀ ಭಗವದ್ಗೀತೆ ಉದ್ಯಾನವನದಲ್ಲಿ ನಡೆದ ವಿಧ್ವಂಸಕ ಕೃತ್ಯವನ್ನು ಭಾರತ ಖಂಡಿಸಿದೆ. ಅಪರಾಧಿಗಳ ವಿರುದ್ಧ ತನಿಖೆ ನಡೆಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದೆ.
ಈ ಹಿಂದೆ ಟ್ರಾಯರ್ಸ್ ಪಾರ್ಕ್ ಎಂದು ಕರೆಯಲ್ಪಡುತ್ತಿದ್ದ ಉದ್ಯಾನಕ್ಕೆ ಶ್ರೀ ಭಗವದ್ಗೀತಾ ಪಾರ್ಕ್ ಎಂದು ಮರುನಾಮಕರಣ ಮಾಡಿ,ಸೆಪ್ಟೆಂಬರ್ 28 ರಂದು ಅನಾವರಣಗೊಳಿಸಲಾಗಿತ್ತು.
'ಬ್ರಾಂಪ್ಟನ್‌ನಲ್ಲಿರುವ ಶ್ರೀ ಭಗವದ್ಗೀತಾ ಪಾರ್ಕ್‌ನಲ್ಲಿ ನಡೆದ ದ್ವೇಷದ ಅಪರಾಧವನ್ನು ನಾವು ಖಂಡಿಸುತ್ತೇವೆ. ಕೆನಡಾದ ಅಧಿಕಾರಿಗಳು ಮತ್ತು ಪೊಲೀಸರು ತನಿಖೆ ನಡೆಸಿ ಅಪರಾಧಿಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳಲು ನಾವು ಒತ್ತಾಯಿಸುತ್ತೇವೆ' ಎಂದು ಕೆನಡಾದಲ್ಲಿರುವ ಭಾರತದ ಹೈಕಮಿಷನ್ ಟ್ವೀಟ್ ಮಾಡಿದೆ.
ಕೆನಡಾದಲ್ಲಿ ಮತ್ತೊಂದು ದೇವಾಲಯವನ್ನು ಧ್ವಂಸಗೊಳಿಸಿದ ಕೆಲ ದಿನಗಳ ಬೆನ್ನಲ್ಲೇ ಈ ದಾಳಿ ನಡೆದಿದೆ.
ಭಾನುವಾರ ಉದ್ಯಾನದಲ್ಲಿ ವಿಧ್ವಂಸಕ ಕೃತ್ಯ ನಡೆದಿರುವುದನ್ನು ಖಚಿತಪಡಿಸಿದ ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್, ಕೆನಡಾವು ಅಂತಹ ದಾಳಿಕೋರರ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದು ಹೇಳಿದರು.
'ಇತ್ತೀಚೆಗೆ ಅನಾವರಣಗೊಂಡ ಶ್ರೀ ಭಗವದ್ಗೀತಾ ಪಾರ್ಕ್ ಫಲಕವನ್ನು ಧ್ವಂಸಗೊಳಿಸಲಾಗಿದೆ ಎಂಬುದು ನಮಗೆ ತಿಳಿದಿದೆ. ಕೃತ್ಯದ ಬಗ್ಗೆ ನಾವು ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ. ಹೆಚ್ಚಿನ ತನಿಖೆಗಾಗಿ ಪೀಲ್‌ನ ಪ್ರಾದೇಶಿಕ ಪೊಲೀಸರಿಗೆ ಸೂಚಿಸಿದ್ದೇವೆ. ಉದ್ಯಾನಕ್ಕೆ ಸಂಬಂಧಿಸಿದ ಅಧಿಕಾರಿಗಳು ಫಲಕಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ' ಎಂದು ಬ್ರೌನ್ ಭಾನುವಾರ ಟ್ವೀಟ್ ಮಾಡಿದ್ದಾರೆ.
ಸೆಪ್ಟೆಂಬರ್ 15ರಂದು, ಕೆನಡಾದ ಪ್ರಮುಖ ಹಿಂದೂ ದೇವಾಲಯವಾದ ಬೋಚ ಸನ್ಯಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ(ಬಿಎಪಿಎಸ್) ಸ್ವಾಮಿನಾರಾಯಣ ಮಂದಿರದ ಮೇಲೆ ಕೆನಡಿಯನ್ ಖಲಿಸ್ತಾನಿ ಉಗ್ರಗಾಮಿಗಳು ದಾಳಿ ಮಾಡಿದ್ದರು.