ಕುಂಬಳೆ: ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಮಹತ್ವದ ಕೆಲಸ ನಿರ್ವಹಿಸುತ್ತಿರುವ ಮೇಲ್ಪರಂಬದ ಆಶ್ವಾಸಂ ವೈದ್ಯರ್ ಅವರ ಸೇವೆ ಜನಮನ್ನಣೆಗೆ ಕಾರಣವಾಗುತ್ತಿದೆ.
ಆಶ್ವಾಸಂ ವೈದ್ಯರ್ ಅವರು ಜಿಲ್ಲೆಯ ನಾನಾ ಶಾಲೆಗಳು, ಸಂಘ ಸಂಸ್ಥೆಗಳ ಮೂಲಕ ತಮ್ಮ ಕಾಯಕವನ್ನು ಸದ್ದಿಲ್ಲದೆ ನಡೆಸಿಕೊಂಡು ಬರುತ್ತಿದ್ದಾರೆ. ಪೈವಳಿಕೆ ಪಂಚಾಯಿತಿಯ ಕುಡಾಲ್‍ಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಔಷಧೀಯ ಸಸ್ಯಗಳ ಮಾಹಿತಿ ಮತ್ತು ಸಸ್ಯ ತೋಟ ನಿರ್ಮಾಣಕಾರ್ಯ ಆಶ್ವಾಸಂ ವೈದ್ಯರ್ ಅವರ ನೇತೃತ್ವದಲ್ಲಿ ನೆರವೇರಿತು. ಶಾಲಾ ವಠಾರದಲ್ಲಿ ಔಷಧೀಯ ಗುಣವುಳ್ಳ 40ಕ್ಕೂ ಹೆಚ್ಚು ಸಸ್ಯಗಳನ್ನು ನೆಡಲಾಯಿತು. ಔಷಧೀಯ ಸಸ್ಯಗಳ ಬಗ್ಗೆ ಸಮಗ್ರ ಮಾಹಿತಿ, ಇವುಗಳ ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮಾಹಿತಿ ನೀಡಿದರು. ಔಷಧೀಯ ಸಸ್ಯಗಳು ನಮ್ಮ ಮನೆ ವಠಾರದಲ್ಲಿದ್ದರೂ, ಇವುಗಳ ಬಗ್ಗೆ ನಮಗಿಂದು ಮಾಹಿತಿ ಇಲ್ಲದಾಗಿದೆ. ಹಿತ್ತಿಲಲ್ಲಿ ಲಭಿಸುವ ಹಲವಾರು ಸಸ್ಯಗಳು ಔಷಧೀಯ ಗುಣ ಹೊಂದಿದ್ದು, ಇವುಗಳನ್ನು ಪತ್ತೆಹಚ್ಚಿ ಬಳಸಲು ಹಾಗೂ ಇವುಗಳ ಬಳಕೆಯಿಂದ ಕೆಲವೊಂದು ಕಾಯಿಲೆಗಳಿಂದ ತಕ್ಷಣ ಚಿಕಿತ್ಸೆ ಕಂಡುಕೊಳ್ಳಲು ಸಾಧ್ಯವಾಗುತ್ತಿದೆ. ಆದರೆ ಸಣ್ಣ ಕಾಯಿಲೆಗಳಿಗೂ ದೊಡ್ಡ ಆಸ್ಪತ್ರೆಗಳನ್ನು ಅರಸಿಕೊಂಡು ಹೋಗುವ ಸನ್ನಿವೇಶ ಎದುರಾಗಿದ್ದು, ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡು ಇವುಗಳನ್ನು ಔಷಧಿಯಾಗಿ ಬಳಕೆಮಾಡುವುದನ್ನು ನಾವು ಕರಗತಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಶಾಲಾ ಸೀಡ್ ಕ್ಲಬ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಭಂಡಾರಿ ಸಸಿ ನೆಡುವ ಮೂಲಕ ಸಮಾರಂಭ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶೆಫೀಕ್ ಕುಂಡೇರಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಪ್ರಕಾಶನ್ ಪಿ. ಉಪಸ್ಥಿತರಿದ್ದರು. ಸಂತೋಷ್ ಕೆ.ವಿ ಸ್ವಾಗತಿಸಿದರು. ಸೀಡ್‍ಕ್ಲಬ್ ನೇತೃತ್ವ ವಹಿಸಿರುವ ಶಿಕ್ಷಕ ನಿರ್ಮಲ್‍ದೇವ್ ವಂದಿಸಿದರು.
ಔಷಧೀಯ ಸಸ್ಯ ತೋಟ ನಿರ್ಮಿಸುವ ಮೂಲಕ ಗಮನಸೆಳೆದ ಕುಡಾಲ್‍ಮೇರ್ಕಳ ಶಾಲೆ
0
ಅಕ್ಟೋಬರ್ 28, 2022