ನವದೆಹಲಿ: ವೈದ್ಯರ ಮೇಲೆ ಹೆಚ್ಚುತ್ತಿರುವ ಹಲ್ಲೆ ಮತ್ತು ಅವರ ರಕ್ಷಣೆಗಾಗಿ ಮಾರ್ಗಸೂಚಿ ರೂಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಶುಕ್ರವಾರ ಕೇಂದ್ರ, ಭಾರತೀಯ ವೈದ್ಯಕೀಯ ಮಂಡಳಿ ಸೇರಿದಂತೆ ಇತರರಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೇಳಿದೆ.
ದೌಸಾದಲ್ಲಿ ಸ್ತ್ರೀರೋಗ ತಜ್ಞೆ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ದಿಲ್ಲಿ ಡಾಕ್ಟರ್ಸ್ ಫೋರಂ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ದ್ವಾರಕಾ) ಮತ್ತು ಸುನೀತ್ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಗಳ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರ ಪೀಠವು ರಾಜಸ್ಥಾನ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಹೆರಿಗೆ ಸಮಯದಲ್ಲಿ ಮಹಿಳೆಯೊಬ್ಬರು ಹೆಚ್ಚಿನ ರಕ್ತಸ್ರಾವದಿಂದ ಮೃತಪಟ್ಟ ಬಳಿಕ ಜನರಿಂದ ತೀವ್ರ ಟೀಕೆಗೆ ಒಳಗಾದ ಉಪಾಧ್ಯಾಯ ಅವರ ಪತ್ನಿ ಸ್ತ್ರೀರೋಗ ತಜ್ಞೆ ಅರ್ಚನಾ ಶರ್ಮಾ ಅವರು ರಾಜಸ್ಥಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ವೈದ್ಯಕೀಯ ಅಸೋಸಿಯೇಷನ್ (ದ್ವಾರಕಾ) ಪರ ವಕೀಲ ಶಶಾಂಕ್ ದೇವ್ ಸುಧಿ, 'ಆರೋಗ್ಯ ಸಂಬಂಧಿ ಕಾರಣಗಳಿಗೆ ರೋಗಿ ಮೃತಪಟ್ಟರೂ ದೇಶದ ವಿವಿಧೆಡೆ ವೈದ್ಯರ ಮೇಲೆ ದಾಳಿ ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ವೈದ್ಯಕೀಯ ಪರಿಭಾಷೆ ಅರ್ಥ ಮಾಡಿಕೊಳ್ಳುವುದಿಲ್ಲ. ವೈದ್ಯರನ್ನು ರಕ್ಷಿಸಲು ಸಮಗ್ರ ಮಾರ್ಗಸೂಚಿ ರೂಪಿಸುವ ಅವಶ್ಯಕತೆಯಿದೆ' ಎಂದು ಹೇಳಿದರು.