ಕಾಸರಗೋಡು: ಕನ್ನಡ ಭಾಷಾ ಅಲ್ಪಸಂಖ್ಯಾತರ ನಿರ್ಲಕ್ಷ್ಯದ ವಿರುದ್ಧ ಬಿಜೆಪಿ ಜನಪ್ರತಿನಿಧಿಗಳು, ಕಾರ್ಯಕರ್ತರು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.
ವಿವಿಧ ಸೇವೆಗಳಿಗಾಗಿ ಪಂಚಾಯಿತಿಗೆ ಆಗಮಿಸುವ ಕನ್ನಡಿಗರಿಗೆ ಅವರ ಭಾಷೆಯಲ್ಲಿ ಅರ್ಜಿ ನಮೂನೆಗಳನ್ನು ಸ್ವೀಕರಿಸಲು ಪಂಚಾಯಿತಿ ಸಿದ್ಧರಾಗಬೇಕು. ಇದಕ್ಕಾಗಿ ತಾತ್ಕಾಲಿಕ ಅಧಿಕಾರಿಯನ್ನು ನೇಮಿಸಲಾಗಿದ್ದರೂ, ಈ ಅಧಿಕಾರಿಯನ್ನು ಕನ್ನಡದ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿಲ್ಲ. ಅರ್ಜಿಗಳು ಮಲಯಾಳಂ ಭಾಷೆಯಲ್ಲಿಯೇ ಇರುವುದರಿಂದ ಕನ್ನಡ ಮಾತ್ರ ಬಲ್ಲ ಅನೇಕರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಅಂಗ ಸಂಸ್ಥೆಗಳಲ್ಲಿ ಕನ್ನಡದಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಮತ್ತು ವಿತರಿಸಲು ಕ್ರಮ ಕೈಗೊಳ್ಳಬೇಖು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಕನ್ನಡದಲ್ಲಿ ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಬೇಕು, ಜನಪ್ರತಿನಿಧಿಗಳು ಆಡಳಿತ ಮಂಡಳಿಯ ಕಾರ್ಯಸೂಚಿ, ನಿರ್ಧಾರಗಳು ಮತ್ತು ಇತರ ಅಧಿಸೂಚನೆಗಳನ್ನು ಕನ್ನಡದಲ್ಲಿಯೂ ಪಡೆಯುವಂತಾಘಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಮುಂದಿರಿಸಿ ಭಾರತೀಯ ಜನತಾ ಪಕ್ಷದ ಜನಪ್ರತಿನಿಧಿಗಳು ಉಪವಾಸ ಸತ್ಯಾಗ್ರಹ ನಡೆಸಿದರು.
ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾಯತ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯೆ, ನಗರಸಭಾ ಸದಸ್ಯೆ ಸವಿತಾ ಟೀಚರ್ ಉದ್ಘಾಟಿಸಿದರು, ಬಿಜೆಪಿಮಂಡಲ ಸಮಿತಿ ಉಪಾಧ್ಯಕ್ಷ ಮಾಧವ ಮಾಸ್ಟರ್, ಜಿಲ್ಲಾ ಸಮಿತಿ ಸದಸ್ಯ ಉಮೇಶ ಕಡಪುರ, ಮಂಡಲ ಉಪಾಧ್ಯಕ್ಷ ಹರ್ಷವರ್ಧನ್ ನಾಯ್ಕ್, ಹಿರಿಯ ಕಾರ್ಯಕರ್ತರಾದ ಕಮಲಾಕ್ಷ ಕೆ.ಬಿ, ರಾಜೇಶ್ ನಾಯ್ಕ್, ಸತೀಶ್ ಮಾಸ್ಟರ್, ವಿಷ್ಣು ಶ್ಯಾನುಬೋಗ್, ಸರೋಜಿನಿ, ರೈತ
ಮೋರ್ಚಾ ಮಂಡಲ ಅಧ್ಯಕ್ಷ ನವನೀತ ರೈ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ, ಯೋಗೀಶ್, ಪಂಚಾಯತ್ ಪ್ರತಿನಿಧಿಗಳಾದ ಪ್ರಮೀಳಾ ಮಜಲ್, ಸಂಪತ್ ಕುಮಾರ್, ಸುಲೋಚನಾ, ಜಿ.ಬಿ. ಮಜಲ್ ಉಪಸ್ಥಿತರಿದ್ದರು. ನವನೀತ ಸ್ವಾಗತಿಸಿದರು. ಗಣೇಶ್ ನಾಯ್ಕ್ ವಂದಿಸಿದರು.