ಪೆರ್ಲ:ಮಾದಕ ವಸ್ತುವಿನ ದಾಸರಾಗುವುದು ಮತ್ತು ಅತಿಯಾದ ಮೊಬೈಲ್ ಬಳಕೆ ನಮ್ಮ ಜೀವನವನ್ನು ಸಂಕಷ್ಟಕ್ಕೆ ತಳ್ಳಲಿರುವುದಾಗಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ರಾಜೇಂದ್ರ ತಿಳಿಸಿದ್ದಾರೆ. ಅವರು ಶಾಲೆಯಲ್ಲಿ ಮಾದಕವಸ್ತು ವಿರೋಧಿ ಅಭಿಯಾನ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಷಣಿಕ ಸುಖಕ್ಕಾಗಿ ಸೇವಿಸುವ ಮಾದಕ ವಸ್ತು ನಮ್ಮ ಬಾಳನ್ನು ಸಂಪೂರ್ಣ ವಿನಾಶದತ್ತ ಕೊಂಡೊಯ್ಯಲಿದೆ ಎಂದು ತಿಳಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಪೊಲೀಸ್ ಠಾಣೆಯ ಚೈಲ್ಡ್ ಪ್ರೊಟೆಕ್ಷನ್ ಅಧಿಕಾರಿ, ಪ್ರಕಾಶನ್ ಮಾದಕ ದ್ರವ್ಯದ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಭವಿಷ್ಯದಲ್ಲಿ ಎದುರಾಗುವ ಮಸ್ಯೆಗಳ ಬಗ್ಗೆ ಉದಾಹರಣೆ ಸಹಿತವಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾದಕ ಮುಕ್ತ ಕೇರಳ ಅಭಿಯಾನ ಅಂಗವಾಗಿ ನಡೆಸಿದ ಭಾಷಣದ ಪ್ರಸಾರವನ್ನು ಪ್ರಸ್ತುತಪಡಿಸಲಾಯಿತು. ಹಿರಿಯ ಶಿಕ್ಷಕ ಕೇಶವ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳ ಹೆತ್ತವರು ಪಾಲ್ಗೊಂಡಿದ್ದರು.
ಪೆರ್ಲ ಶಾಲೆಯಲ್ಲಿ ಮಾದಕ ವಸ್ತು ವಿರೋಧಿ ಅಭಿಯಾನ, ಜಾಗೃತಿ ಕಾರ್ಯಕ್ರಮ
0
ಅಕ್ಟೋಬರ್ 10, 2022
Tags