ನವದೆಹಲಿ:ಭಾರತ ವಿಶ್ವದಲ್ಲೇ ಗರಿಷ್ಠ ಸಕ್ಕರೆ ಉತ್ಪಾದನೆ ಮಾಡುವ ರಾಷ್ಟ್ರವಾಗಿ ಮತ್ತೆ ಹೊರಹೊಮ್ಮಿದೆ. ಸಕ್ಕರೆ ರಫ್ತು ಮಾಡುವ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿದೆ ಎಂದು timesofindia.com ವರದಿ ಮಾಡಿದೆ.
ಸರ್ಕಾರ ಬುಧವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 2021-22ರ (ಅಕ್ಟೋಬರ್ ನಿಂದ ಸೆಪ್ಟೆಂಬರ್) ಅವಧಿಯಲ್ಲಿ ಭಾರತ 1.1 ಕೊಟಿ ಟನ್ ಸಕ್ಕರೆ ರಫ್ತು ಮಾಡಿದೆ.
ಇದು ಕಳೆದ ವರ್ಷದ ರಫ್ತಿನ ಪ್ರಮಾಣಕ್ಕೆ ಹೋಲಿಸಿದರೆ ಶೇಕಡ 58ರಷ್ಟು ಅಧಿಕ. ಇದು ದೇಶಕ್ಕೆ 40 ಸಾವಿರ ಕೋಟಿ ರೂ. ವಿದೇಶಿ ವಿನಿಮಯದ ಒಳಹರಿವಿಗೆ ಕಾರಣವಾಗಿದೆ.
ಈ ಅವಧಿಯಲ್ಲಿ ಕಬ್ಬು ಉತ್ಪದನೆ 40 ಕೋಟಿ ಟನ್ ಎಂದು ಅಂದಾಜಿಸಲಾಗಿದ್ದು, ಸಕ್ಕರೆ ಉತ್ಪಾದನೆ 3.9 ಕೋಟಿ ಟನ್‍ಗಳಾಗಿವೆ. ದೇಶೀಯ ಉತ್ಪಾದನೆಯ ಶೇಕಡ 28ರಷ್ಟನ್ನು ಭಾರತ ರಫ್ತು ಮಾಡಿದೆ.
2019ರಲ್ಲಿ ಕೂಡಾ ಭಾರತ ಅತಿದೊಡ್ಡ ಸಕ್ಕರೆ ಉತ್ಪಾದನಾ ದೇಶವಾಗಿತ್ತು ಎಂದು ಅಂತರರಾಷ್ಟ್ರೀಯ ಸಕ್ಕರೆ ಸಂಸ್ಥೆಯ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಈ ಅವಧಿಯಲ್ಲಿ ಭಾರತ 2.97 ಕೋಟಿ ಟನ್ ಸಕ್ಕರೆ ಉತ್ಪಾದಿಸಿದ್ದರೆ, ಎರಡನೇ ಸ್ಥಾನದಲ್ಲಿರುವ ಬ್ರೆಝಿಲ್ 2.92 ಕೋಟಿ ಟನ್ ಸಕ್ಕರೆ ಉತ್ಪಾದಿಸಿದೆ. ಹಲವು ವರ್ಷಗಳಿಂದ ಬ್ರೆಝಿಲ್ ಹಾಗೂ ಥಾಯ್ಲೆಂಡ್ ಮೊದಲ ಸ್ಥಾನಗಳನ್ನು ಹಂಚಿಕೊಂಡಿದ್ದವು.
ಆದರೆ ಇದೀಗ ಬಂಪರ್ ಬೆಳೆಯ ಅವಧಿಯಲ್ಲಿ ಭಾರತ ಅತಿ ಹೆಚ್ಚು ಸಕ್ಕರೆ ರಫ್ತು ಮಾಡುವ ದೇಶವಾಗಿ ರೂಪುಗೊಳ್ಳುತ್ತಿದೆ. 2017-18ರಲ್ಲಿ 6.2 ಲಕ್ಷ ಟನ್ ಇದ್ದ ಸಕ್ಕರೆ ರಫ್ತು ಪ್ರಮಾಣ 2020-21ರ ಅವಧಿಯಲ್ಲಿ ಹನ್ನೊಂದು ಪಟ್ಟು ಹೆಚ್ಚಿದೆ ಎಂದು ಅಧಿಕೃತ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.