ಕೊಚ್ಚಿ: ವಾಹನ ಖರೀದಿಸಿ ಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಿರುವ ಆರೋಪ ಕೇರಳದ ಪೊಲೀಸ್ ಪೇದೆ ಒಬ್ಬರ ವಿರುದ್ಧ ಕೇಳಿಬಂದಿದೆ. ಪೊಲೀಸ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾಕಷ್ಟು ಮಹಿಳೆಯಿಂದ ಆರೋಪಿ ಹಣ ಸುಲಿಗೆ ಮಾಡಿದ್ದಾನೆ.
ಆರೋಪಿಯ ಹೆಸರು ಬಿನುಕುಮಾರ್. ಈತ ಕೇರಳದ ಕೊನ್ನಿ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರು ಖರೀದಿ ಮಾಡಿ ಕೊಡುವುದಾಗಿ ಮಹಿಳೆಯೊಬ್ಬರಿಂದ 13.5 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿದ್ದು, ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಲಾಗಿದೆ.
ಕಾರು ಖರೀದಿ ಮಾಡಿದ್ದಲ್ಲದೆ, ಬಳಿಕ ಅದನ್ನು 10 ಲಕ್ಷ ರೂಪಾಯಿಗೆ ಅಡಮಾನ ಇಟ್ಟಿದ್ದಾನೆ. ಈ ಕೊನ್ನಿ ಪೊಲೀಸ್ ಠಾಣೆಗೆ ಸೇರಿದಾಗಿನಿಂದ ಸುಮಾರು ಐವರು ಮಹಿಳೆಯರಿಗೆ ವಂಚನೆ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಹಿಂದೆ ಪೆರುನಾಡು ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ಮಹಿಳೆಯರಿಗೆ ವಂಚನೆ ಮಾಡಿರುವುದಾಗಿ ತಿಳಿದುಬಂದಿದೆ. ವಿಧವೆಯೊಬ್ಬರ ಬಳಿ 2 ಲಕ್ಷ ರೂ. ಹಾಗೂ ಇತರರಿಂದ ಸುಮಾರು 50 ಸಾವಿರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಆರೋಪ ಮಾಡಲಾಗಿದೆ.