ಮಂಗಳೂರು: ಪಿಎಫ್ಐ ಸಂಘಟನೆ ನಿಷೇಧದ ಬಳಿಕವೂ ದುಷ್ಕರ್ಮಿಗಳು ವಿಧ್ವಂಸಕಕ್ಕೆ ಸಂಚು ರೂಪಿಸುವುದನ್ನು ಮುಂದುವರಿಸಿದ್ದಾರೆ. ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಪಿಎಫ್ಐಗೆ ಸೇರಿದ ಐವರನ್ನು ಇಂದು ಮಂಗಳೂರಿನಲ್ಲಿ ಬಂಧಿಸಲಾಗಿದೆ.
ಈ ಬಗ್ಗೆ ಮಾತನಾಡಿದ, ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್, ನಿಷೇಧಿತ ಪಿಎಫ್ಐಗೆ ಸೇರಿದ ಐವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದರು. ವಿಚಾರಣೆ ವೇಳೆ ಆರೋಪಿಗಳು ಯಾರ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು. ಯಾವ ರೀತಿ ಸಂಚು ರೂಪಿಸಿದ್ದರು ಎಂಬ ವಿಚಾರಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಶಾಂತಿಯೂತ ಪ್ರತಿಭಟನೆ ಮಾಡಿದರೆ ನಮ್ಮ ಕಡೆಯಿಂದ ಯಾವುದೇ ಅಡ್ಡಿ ಇರುವುದಿಲ್ಲ. ಕಾನೂನು ಮೀರಿ ಯಾರಾದರು ಪ್ರತಿಭಟನೆ ಮಾಡಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪಿಎಫ್ಐ ಸಂಘಟನೆ ನಿಷೇಧವಾಗಿದ್ದರೂ ಅದರ ಕಾರ್ಯಕರ್ತರ ಮೇಲೆ ನಾವು ಕಣ್ಣು ಇಟ್ಟಿದ್ದೇವೆ. ಕರಾವಳಿ ಭಾಗವಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ದಾವಣಗೆರೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಮ್ಮ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಎಲ್ಲಾ ವಿಚಾರಗಳನ್ನು ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ ಎಂದರು.
ಪುತ್ತೂರು ಬಿಟ್ಟು ಮತ್ತೆಲ್ಲಿ ತರಬೇತಿ ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಅಲೋಕ್ ಕುಮಾರ್ ಹೇಳಿದರು.